ತಿರುವನಂತಪುರಂ: ನಿಷೇಧಿತ ಕೊಳವೆಯಾಕಾರದ ಧ್ವನಿವರ್ಧಕ ಬಳಸುವ ಪ್ರಾರ್ಥನಾ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸುಮಾರು 250 ಪೂಜಾ ಸ್ಥಳಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಸೂಚನೆಯನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಹಳೆ ಮಾದರಿಯ ಕೊಳವೆ ಸ್ಪೀಕರ್‍ಗಳನ್ನು ತೆಗೆದುಹಾಕಲು ಸೂಚನೆ ನೀಡಲಾಗಿದೆ. ಇದನ್ನು ಪಾಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.
ಹಲವು ಆರಾಧನಾ ಕೇಂದ್ರಗಳಲ್ಲಿ ಈಗಲೂ ನಿಷೇಧಿತ ಮೈಕ್ ಬಳಕೆ ಮಾಡುತ್ತಿರುವ ಬಗ್ಗೆ ಗೃಹ ಇಲಾಖೆಗೆ ದೂರು ಬಂದಿತ್ತು. ದೂರಿನ ಜತೆಗೆ ಆರಾಧನಾ ಸ್ಥಳಗಳ ಪಟ್ಟಿಯನ್ನೂ ನೀಡಲಾಗಿತ್ತು. ಮೇ ತಿಂಗಳಲ್ಲಿ ಬಂದಿರುವ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಪೋಲೀಸ್ ವರಿಷ್ಠರಿಗೆ ಸೂಚಿಸಿದೆ. ದೇವಾಲಯಗಳು, ಮಸೀದಿಗಳು ಮತ್ತು ಕ್ರಿಶ್ಚಿಯನ್ ಚರ್ಚ್‍ಗಳು ಪಟ್ಟಿಯಲ್ಲಿವೆ.
2018 ರಲ್ಲಿ, ತಿರುವಾಂಕೂರು ದೇವಸ್ವಂ ಮಂಡಳಿಯು ಶಬ್ದ ಮಾಲಿನ್ಯವನ್ನು ಉಲ್ಲೇಖಿಸಿ ದೇವಾಲಯಗಳಲ್ಲಿ ಕೊಳವೆ ಮೈಕ್ ಬಳಕೆಗೆ ನಿಷೇಧಿಸಿತ್ತು. ಮುಟುಕುಳಂ ನಿವಾಸಿ ಎ.ವಿ. ಮೋಹನನ್ ಪಿಳ್ಳೈ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ನೀಡಲಾಗಿತ್ತು. 2020 ರಲ್ಲಿ, ಕೇರಳದಾದ್ಯಂತ ಕೊಳವೆ ಮೈಕ್‍ಗಳ ಬಳಕೆಯನ್ನು ಹೈಕೋರ್ಟ್ ನಿಷೇಧಿಸಿದ್ದು, ಹೆಚ್ಚಿನ ಪೂಜಾ ಸ್ಥಳಗಳು ಅವುಗಳನ್ನು ಬಳಸುವುದನ್ನು ನಿಲ್ಲಿಸಿದವು. ಆದಾಗ್ಯೂ, ಕೆಲವು ಆರಾಧನಾಲಯಗಳು ಇನ್ನೂ ಅವುಗಳನ್ನು ಬಳಸುವುದನ್ನು ಮುಂದುವರೆಸುತ್ತಿರುವುದೂ ಕಂಡುಬಂದಿದೆ. ಪ್ರಸ್ತುತ ಬಾಕ್ಸ್ ಮಾದರಿಯ ಸ್ಪೀಕರ್‍ಗಳನ್ನು ಮಾತ್ರ ಬಳಸಲು ಅನುಮತಿಸಲಾಗಿದೆ. ಇವುಗಳಲ್ಲಿಯೂ ಧ್ವನಿ 55 ಡಿಬಿಗಿಂತ ಹೆಚ್ಚಿರಬಾರದು. ಹೀಗಾದರೆ ಪೆÇಲೀಸರು ಕ್ರಮ ಕೈಗೊಳ್ಳಬಹುದು.
ಹಿಂದೆ, ಕೊಳವೆಬಾಯಿ ರೀತಿಯ ಸ್ಪೀಕರ್‍ಗಳನ್ನು ಮದುವೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಪ್ರಕಟಣೆಗಳ ಪ್ರಚಾರಕ್ಕೆ ಬಳಸಲಾಗುತ್ತಿತ್ತು. ಅಲ್ಲದೆ, ಅಂತಹ ಮೈಕ್ ಗಳು ಭಾಷಣ, ದೇವಾಲಯಗಳು, ಮಸೀದಿಗಳು ಮತ್ತು ಕ್ರಿಶ್ಚಿಯನ್ ಚರ್ಚ್‍ಗಳಲ್ಲಿ ನಿಯಮಿತವಾಗಿ ಬಳಕೆಯಲ್ಲಿವೆ. 2014 ರಲ್ಲಿ, ಈ ವಿಷಯದಲ್ಲಿ ಮೊದಲ ಬಾರಿಗೆ ಹೈಕೋರ್ಟ್ ಮಧ್ಯಪ್ರವೇಶಿಸಿತ್ತು. ಅಂತಹ ಮೈಕ್ ಬಳಕೆ ನಿಷೇಧಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು. ಪ್ರಕರಣದಲ್ಲಿ ಕಕ್ಷಿದಾರರಾಗಿದ್ದ ತಿರುವಾಂಕೂರು ದೇವಸ್ವಂ ಬೋರ್ಡ್ ಇನ್ನು ಮುಂದೆ ಇಂತಹ ಸ್ಪೀಕರ್ ಗಳನ್ನು ಬಳಸುವುದಿಲ್ಲ ಎಂಬ ನಿಲುವು ತಳೆದಿದೆ. ಆದರೆ ಆ ಕಾನೂನು ಉಲ್ಲಂಘಿಸಿದಾಗ ಎ.ವಿ. ಮೋಹನನ್‍ಪಿಳ್ಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ನಂತರ 2018 ಮತ್ತು 2020 ರಲ್ಲಿ ಬಲವಾದ ನ್ಯಾಯಾಲಯದ ಮಧ್ಯಸ್ಥಿಕೆಗಳು ಬಂದವು.