ವಿಶ್ವಸಂಸ್ಥೆ: ಉತ್ತರ ಗಾಜಾದಲ್ಲಿರುವ 10 ಲಕ್ಷಕ್ಕೂ ಅಧಿಕ ಜನರು 24 ತಾಸಿನೊಳಗೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ನೀಡಿದ ಎಚ್ಚರಿಕೆಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಇದು ಅತ್ಯಂತ ಅಪಾಯಕಾರಿಯಾಗಿದ್ದು, ಯುದ್ಧಗಳು ಸಹ ನಿಯಮಗಳನ್ನು ಹೊಂದಿರುತ್ತವೆ ಎಂದು ಹೇಳಿದ್ದಾರೆ.
24 ತಾಸಿನಗಳೊಗೆ ಲಕ್ಷಾಂತರ ಮಂದಿ ಸ್ಥಳಾಂತರ ಮಾಡುವುದು ಕಷ್ಟಸಾಧ್ಯ ಎಂದು ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತರ ಗಾಜಾದ 10 ಲಕ್ಷಕ್ಕೂ ಹೆಚ್ಚು ಜನರು 24 ಗಂಟೆಯೊಳಗೆ ದಕ್ಷಿಣ ಗಾಜಾಕ್ಕೆ ಸ್ಥಳಾಂತರ ಮಾಡಬೇಕು ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ಮಿಲಿಟರಿ ತಿಳಿಸಿದೆ. ಶಾಲೆ, ಆರೋಗ್ಯ ಕೇಂದ್ರ ಮತ್ತು ಚಿಕಿತ್ಸಾಲಯ ಸೇರಿದಂತೆ ವಿಶ್ವಸಂಸ್ಥೆಯ ಆಶ್ರಯ ತಾಣಗಳಲ್ಲಿ ಆಶ್ರಯ ಪಡೆದವರಿಗೂ ಈ ಎಚ್ಚರಿಕೆ ಅನ್ವಯವಾಗುತ್ತದೆ.
ಇಡೀ ಭೂಪ್ರದೇಶವು ವಶಕ್ಕೊಳಗಾಗಿರುವಾಗ, ಆಹಾರ, ನೀರು ಅಥವಾ ವಸತಿ ಇಲ್ಲದೆ ಒಂದು ಪ್ರದೇಶಕ್ಕೆ 10 ಲಕ್ಷಕ್ಕೂ ಹೆಚ್ಚು ಜನರನ್ನು ಜನನಿಬಿಡ ಯುದ್ಧ ವಲಯದಿಂದ ಸ್ಥಳಾಂತರ ಮಾಡುವುದು ನಿಜಕ್ಕೂ ಅತ್ಯಂತ ಅಪಾಯಕಾರಿ ಪ್ರಕ್ರಿಯೆಯಾಗಿದ್ದು, ಸಾಧ್ಯವಿಲ್ಲ ಎಂದು ಗುಟೆರಸ್ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಸ್ಥಿತಿಗತಿ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಗೆ ತೆರಳುವ ಮುನ್ನ ಗುಟೆರಸ್ ಈ ಹೇಳಿಕೆಯನ್ನು ಕೊಟ್ಟಿದ್ದಾರೆ.
ದಕ್ಷಿಣ ಗಾಜಾದಲ್ಲಿ ಈಗಾಗಲೇ ಆಸ್ಪತ್ರೆಗಳು ತುಂಬಿಕೊಂಡಿದ್ದು, ಉತ್ತರ ಗಾಜಾದಿಂದ ಸಾವಿರಾರು ರೋಗಿಗಳನ್ನು ದಾಖಲಿಸಲು ಸಾಧ್ಯವಿಲ್ಲ. ಆರೋಗ್ಯ ವ್ಯವಸ್ಥೆಯು ಕೆಟ್ಟ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಆರೋಗ್ಯ ಕೇಂದ್ರಗಳ ಮೇಲೆ 34 ದಾಳಿಗಳು ನಡೆದಿದ್ದು, ಕರ್ತವ್ಯದಲ್ಲಿದ್ದ 11 ಆರೋಗ್ಯ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದರು.