ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದಕ್ಕೆ ಸಂಬಂಧಿಸಿದಂತೆ ತಾನು ಸಿದ್ಧಪಡಿಸಿರುವ ಯೋಜನೆ ಕುರಿತ ಮಾಹಿತಿಯನ್ನು ಕಾನೂನು ಆಯೋಗವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಅ.25ರಂದು ಸಲ್ಲಿಸಲಿದೆ.

ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಕುರಿತು ಅಭಿಪ್ರಾಯಗಳನ್ನು ತಿಳಿಸುವಂತೆ ಸಮಿತಿಯು ಆಯೋಗವನ್ನು ಕೋರಿತ್ತು.
ಇತ್ತೀಚೆಗೆ ಮೊದಲ ಸಭೆ ನಡೆಸಿದ್ದ ಕೋವಿಂದ ನೇತೃತ್ವದ ಉನ್ನತ ಸಮಿತಿಯು, ಈ ವಿಚಾರವಾಗಿ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಕೇಳಲು ನಿರ್ಧರಿಸಿತ್ತು. ಅದರಂತೆ, ಅಭಿಪ್ರಾಯಗಳನ್ನು ತಿಳಿಸುವಂತೆ ಅವುಗಳಿಗೆ ಪತ್ರವನ್ನು ಬರೆದು, ಎಲ್ಲರಿಗೂ ಒಪ್ಪಿಗೆಯಾಗುವ ದಿನದಂದು ಸಂವಾದ ನಡೆಸಲು ಇಚ್ಛಿಸಿದ್ದಾಗಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಅಲ್ಲದೇ, ರಾಜಕೀಯ ಪಕ್ಷಗಳು ಮುಂದಿನ ಮೂರು ತಿಂಗಳೊಳಗಾಗಿ ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸುವ ಆಯ್ಕೆಯನ್ನು ಕೂಡ ಸಮಿತಿ ನೀಡಿದೆ ಎಂದು ಇವೇ ಮೂಲಗಳು ಹೇಳಿವೆ.
ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವುದು ಅಥವಾ ಕಡಿಮೆ ಮಾಡುವ ಮೂಲಕ 2029ರ ನಂತರ ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭೆಗಳ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಸೂತ್ರವೊಂದನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ಕಾನೂನು ಆಯೋಗವು ಯೋಜನೆ ರೂಪಿಸುತ್ತಿದೆ.