ತಿರುವನಂತಪುರಂ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಭೀರ ವೈಫಲ್ಯ ವರದಿಯಾಗಿದೆ. ಅವಧಿ ಮೀರಿದ ಔಷಧಗಳನ್ನು ರೋಗಿಗಳಿಗೆ ನೀಡಿರುವುದು ಕಂಡುಬಂದಿದೆ.
ಸಿಎಜಿ ವರದಿಯಲ್ಲಿ ಈ ಗಂಭೀರ ವೈಫಲ್ಯ ಬೊಟ್ಟುಮಾಡಲಾಗಿದೆ. ರಾಜ್ಯದ 26 ಸರ್ಕಾರಿ ಆಸ್ಪತ್ರೆಗಳಲ್ಲಿ ಅವಧಿ ಮೀರಿದ ಔಷಧಗಳನ್ನು ರೋಗಿಗಳಿಗೆ ವಿತರಿಸಲಾಗಿರುವುದು ಪತ್ತೆಯಾಗಿದೆ. ಔಷಧಗಳ ಗುಣಮಟ್ಟ ಪರಿಶೀಲನೆಯಲ್ಲಿ ವೈದ್ಯಕೀಯ ಸೇವಾ ನಿಗಮದ ಕಡೆಯಿಂದ ಗಂಭೀರ ವೈಫಲ್ಯ ಕಂಡುಬಂದಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಲ್ಲಿ ಹೇಳಲಾಗಿದೆ. 2016ರಿಂದ 2022ರವರೆಗೆ ಸುಮಾರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಗುಣಮಟ್ಟವಿಲ್ಲದ ಔಷಧಗಳು ಆಸ್ಪತ್ರೆಗಳಿಗೆ ತಲುಪಿವೆ.
ಗುಣಮಟ್ಟವಿಲ್ಲದ ಕಾರಣ 3.75 ಕೋಟಿ ಮೌಲ್ಯದ ಔಷಧಗಳನ್ನು ಫ್ರೀಜ್ ಮಾಡಲಾಗಿದ್ದು, 11.69 ಲಕ್ಷ ರೂಪಾಯಿ ಮೌಲ್ಯದ ಔಷಧಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ. ಅವಧಿ ಮೀರಿದ ಔಷಧಿಗಳಲ್ಲಿ ರಾಸಾಯನಿಕ ಬದಲಾವಣೆಗಳು ಸಂಭವಿಸಿ ರೋಗಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.