ನ್ಯೂಯಾರ್ಕ್: 2015ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಮಾಜಿ ಮಿಸ್ ವರ್ಲ್ಡ್ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ ಅಕ್ಟೋಬರ್ 13ರಂದು ತಮ್ಮ 26ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ ಎಂದು New York Post ವರದಿ ಮಾಡಿದೆ.
ಅವರು ಕೀಮೋಥೆರಪಿ ಹಾಗೂ ರೇಡಿಯೊಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.
ಆಕೆಯ ಸಾವು ಉರುಗ್ವೆ ಹಾಗೂ ವಿಶ್ವಾದ್ಯಂತ ಆಘಾತವನ್ನುಂಟು ಮಾಡಿದೆ. ತನ್ನ ಸಹೋದರಿಯ ಸಾವಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಆಕೆಯ ಸಹೋದರ ಮಾಯ್ಕ್ ಡಿ ಅರ್ಮಾಸ್, "ಎತ್ತರಕ್ಕೆ ಹಾರು ಪುಟ್ಟ ಸಹೋದರಿ, ಯಾವಾಗಲೂ ಮತ್ತು ಎಂದೆಂದಿಗೂ" ಎಂದು ಕಂಬನಿ ಮಿಡಿದಿದ್ದಾರೆ. ಶೆರಿಕಾ ಡಿ ಅರ್ಮಾಸ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ 2022ರ ಮಿಸ್ ಯೂನಿವರ್ಸ್ ಉರುಗ್ವೆ ಕಾರ್ಲಾ ರೊಮೆರೊ, "ಶೆರಿಕಾ ಡಿ ಅರ್ಮಾಸ್ ಕೂಡಾ ಈ ಜಗತ್ತಿಗಾಗಿಯೇ ಜನಿಸಿದ್ದರು. ನಾನು ನನ್ನ ಜೀವನದಲ್ಲಿ ಭೇಟಿ ಮಾಡಿದ್ದ ಅತ್ಯಂತ ಸುಂದರ ಮಹಿಳೆಯಾಕೆ" ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗರ್ಭಕಂಠ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡು ಬರುವ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. "2018ರಲ್ಲಿ ವಿಶ‍್ವಾದ್ಯಂತ ಸುಮಾರು 2,70,000 ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪತ್ತೆಯಾಗಿದ್ದು, ಸುಮಾರು 3,11,000 ಮಹಿಳೆಯರು ಈ ರೋಗಕ್ಕೆ ಬಲಿಯಾಗಿದ್ದಾರೆ. ಪರಿಣಾಮಕಾರಿ ಪ್ರಾಥಮಿಕ ಲಸಿಕೆ ಕಾರ್ಯಕ್ರಮ ಹಾಗೂ ದ್ವಿತೀಯ ಹಂತದ ತಡೆ ಕಾರ್ಯಕ್ರಮಗಳಿಂದ ಬಹುತೇಕ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದಾಗಿದೆ" ಎಂದು ಅದರ ಅಂತರ್ಜಾಲ ತಾಣದಲ್ಲಿ ಹೇಳಲಾಗಿದೆ.