ಅಹಮದಾಬಾದ್ (PTI): ಗುಜರಾತ್‌ನ ವಿವಿಧೆಡೆ ಕಳೆದ ಒಂದು ವಾರದ ನವರಾತ್ರಿ ಅವಧಿಯಲ್ಲಿ ಒಟ್ಟು 28 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಸಾವಿನ ಬಗ್ಗೆ ನೈಜ ಕಾರಣ ಪತ್ತೆಹಚ್ಚಲು ಸರ್ಕಾರ ತನಿಖೆಗೆ ಆದೇಶಿಸಿದೆ.
ನವರಾತ್ರಿ ಸಂಭ್ರಮಾಚರಣೆಯಲ್ಲಿ ಸಾಂಪ್ರದಾಯಿಕ ಗಾರ್ಬಾ ನೃತ್ಯ ಪ್ರದರ್ಶಿಸುವ ವೇಳೆ ಹೃದಯಾಘಾತಕ್ಕೆ ತುತ್ತಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹಾಗೂ ಮಹಿಳೆಯೊಬ್ಬರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ಈ ಆರು ಮಂದಿ ಸಾವಿನ ಹೊರತಾಗಿ ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಇಬ್ಬರು ಮಹಿಳೆಯರು ಸೇರಿದಂತೆ 22 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದೆ.
ತುರ್ತು ಸಭೆ ನಡೆಸಿದ ಸಚಿವ:
ದುರಂತದ ಬಗ್ಗೆ ಕಳವಳಗೊಂಡ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಅವರು ಸೋಮವಾರ ತುರ್ತು ಸಭೆ ನಡೆಸಿದರು. ಹೃದ್ರೋಗ ತಜ್ಞರು ಹಾಗೂ ಯು.ಎನ್. ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರ ಸಭೆಯಲ್ಲಿ ಪಾಲ್ಗೊಂಡಿದ್ದರು.
'ಒಂದು ವಾರದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟವರ ಸಾವಿನ ಬಗ್ಗೆ ಅಂಕಿಅಂಶ ಸಂಗ್ರಹಿಸಬೇಕು. ಇದರ ಹಿಂದಿರುವ ನೈಜ ಕಾರಣದ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಆನಂದಿ ಬೆನ್ ಒತ್ತಾಯ:
ಸಾವು ಪ್ರಕರಣದ ಬಗ್ಗೆ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಪಟಾನ್ ಜಿಲ್ಲೆಯ ಸ್ಯಾಂಡರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಳವಾಗಿರುವುದು ಆತಂಕಕಾರಿಯಾಗಿದೆ. ಆರೋಗ್ಯ ಸಚಿವರು ಇದರ ಹಿಂದಿನ ನೈಜ ಕಾರಣವನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
'ಗಾರ್ಬಾ ಪ್ರದರ್ಶನದ ವೇಳೆ ಹಲವು ಯುವಜನರು ಹೃದಯಾಘಾತಕ್ಕೆ ತುತ್ತಾಗಿರುವುದು ನೋವು ತಂದಿದೆ. ಈ ಸಾವಿನ ಅಂಕಿಅಂಶದ ಬಗ್ಗೆ ಕೂಲಂಕಷವಾಗಿ ವಿಶ್ಲೇಷಣೆ ನಡೆಸಬೇಕು' ಎಂದು ಆಗ್ರಹಿಸಿದ್ದಾರೆ.