ನವದೆಹಲಿ: ಬೆಂಗಳೂರಿನ ವಿಜ್ಞಾನಿಗಳು ಹೆಚ್ಚಿನ ದಕ್ಷತೆ ಮತ್ತು ಅಧಿಕ ಶಕ್ತಿಯ 'ಹೀಟ್ ಎಂಜಿನ್' (ಮೈಕ್ರೋ ಎಂಜಿನ್) ಅಭಿವೃದ್ಧಿಪಡಿಸುವ ಮೂಲಕ, ಕಾರುಗಳು ಮತ್ತು ವಿಮಾನಗಳಿಂದ ಹಿಡಿದು ಅಣು ರಿಯಾಕ್ಟರ್‌ಗಳವರೆಗೆ ಎಲ್ಲ ರೀತಿಯ ಎಂಜಿನ್‌ಗಳಿಗೆ ಸಂಬಂಧಿಸಿ ಎರಡು ಶತಮಾನಗಳಿಗೂ ಹೆಚ್ಚಿನ ಸಮಯದಿಂದ ಸವಾಲಾಗಿಯೇ ಉಳಿದಿದ್ದ ಕಾರ್ನಾಟ್ ಉಷ್ಣ ಎಂಜಿನ್ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ನೆಹರೂ ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್‌ನ ಸಂಶೋಧಕರು, ಈ ಹೊಸ ಎಂಜಿನ್ ವಿನ್ಯಾಸಗೊಳಿಸಿ ಮಹತ್ವದ ಸಾಧನೆ ಮಾಡಿದ್ದಾರೆ.
'ಇದು ಅನೇಕ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆದಿದೆ. ಇದು ಹೊಸ ಪ್ರಯಾಣದ ಆರಂಭ. ಅಸಾಧ್ಯವೆಂದು ಭಾವಿಸಿದ್ದನ್ನು ಸಾಧಿಸಲಾಗಿದೆ' ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಮತ್ತು ಅಧ್ಯಯನದ ಸಹ ಲೇಖಕ ಅಜಯ್ ಸೂದ್ ತಿಳಿಸಿದರು.
'ನೇಚರ್ ಕಮ್ಯುನಿಕೇಷನ್ಸ್' ನಿಯತಕಾಲಿಕದಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ. ಆಟೋಮೊಬೈಲ್‌ಗಳಲ್ಲಿ ಬಳಸುವಂತಹ ಅಧಿಕ ಶಕ್ತಿ- ದಕ್ಷತೆಯ ಎಂಜಿನ್‌ಗಳಲ್ಲಿ ಈ ಪ್ರಯೋಗದ ಫಲಿತಾಂಶವು ತಕ್ಷಣಕ್ಕೆ ಹೆಚ್ಚು ಅನ್ವಯ ಹೊಂದಿರದಿದ್ದರೂ, ಇದು ಭವಿಷ್ಯದಲ್ಲಿ ಎಂಜಿನ್‌ಗಳ ಕಾರ್ಯಕ್ಷಮತೆಯ ವೃದ್ಧಿ ವಿಷಯದಲ್ಲಿ ನಡೆಯುವ ಸಂಶೋಧನೆಗೆ ಅನುಕೂಲವಾಗಲಿದೆ ಎಂದು ಸೂದ್ ಅಭಿಪ್ರಾಯಪಟ್ಟಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಯಂತ್ರಗಳಲ್ಲಿ ಈ ತಂತ್ರಜ್ಞಾನವು ಹೆಚ್ಚು ಅನ್ವಯವಾಗುವ ನಿರೀಕ್ಷೆ ಇದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.