ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪಿಡುಗನ್ನು ನಿರ್ಮೂಲನೆ ಮಾಡುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಗುರುವಾರ ಹೇಳಿದ್ದಾರೆ.

ಇಂದಿರಾ ಗಾಂಧಿ ಬಾಲಿಕಾ ಸುರಕ್ಷಾ ಯೋಜನೆಯಡಿ ಪ್ರೋತ್ಸಾಹಧನವನ್ನು ಈಗಿರುವ ₹35,000 ದಿಂದ ₹2 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸುಖು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಸುರಕ್ಷತೆ ಮತ್ತು ನಿಯಂತ್ರಣ ನಿರ್ದೇಶನಾಲಯವು ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ಹೆಣ್ಣು ಮಗು ಜನಿಸಿದ ನಂತರ ಕುಟುಂಬ ಯೋಜನೆ ಅಳವಡಿಸಿಕೊಳ್ಳುವ ಪೋಷಕರಿಗೆ ₹2 ಲಕ್ಷ, ಎರಡು ಹೆಣ್ಣು ಮಕ್ಕಳ ನಂತರ ಇನ್ನೊಂದು ಮಗು ಬೇಡ ಎಂದು ನಿರ್ಧರಿಸುವವರಿಗೆ ₹1 ಲಕ್ಷ ನೀಡಲಾಗುವುದು ಎಂದು ಸುಖು ತಿಳಿಸಿದ್ದಾರೆ.
2018-20ರ ಮಾದರಿ ನೋಂದಣಿ ವ್ಯವಸ್ಥೆಯ ಮಾಹಿತಿಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಲಿಂಗ ಅನುಪಾತವು 950ರಷ್ಟಿದೆ. ಇದು ದೇಶದ ಮೂರನೇ ಅತ್ಯುತ್ತಮ ಸಂಖ್ಯೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ತಮ್ಮ ಸರ್ಕಾರವು 21 ವರ್ಷ ವಯಸ್ಸಿನ ನಂತರ ಮದುವೆಯಾಗುವ ಹುಡುಗಿಯರಿಗೆ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆಯೂ ಯೋಚಿಸುತ್ತಿದೆ ಎಂದು ಅವರು ಹೇಳಿದರು.