ಗುವಾಹಟಿ (ಅಸ್ಸಾಂ): 'ಅನುಮತಿ ಇಲ್ಲದೆ ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಅಸ್ಸಾಂ ಸರ್ಕಾರಿ ನೌಕರರ ಸೇವಾ ನಿಯಮದ ಪ್ರಕಾರ ಯಾವುದೇ ನೌಕರರು 2ನೇ ವಿವಾಹವಾಗಲು ಅರ್ಹರಲ್ಲ. 2ನೇ ವಿವಾಹಕ್ಕೆ ಕೆಲ ಧರ್ಮಗಳಲ್ಲಿ ಅವಕಾಶ ಇದೆ.
ಈ ನಿಯಮ ಹಿಂದೆಯೂ ಇತ್ತು. ಆದರೆ ನಾವು ಅದನ್ನು ಜಾರಿಗೊಳಿಸಿರಲಿಲ್ಲ. ಆದರೆ ಈಗ ಅದನ್ನು ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಸಿಬ್ಬಂದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ ಅವರು ಅ.20 ರಂದು ಹೊರಡಿಸಿದ ಆದೇಶವನ್ನು ಎಲ್ಲಾ ಸರ್ಕಾರಿ ನೌಕರರಿಗೆ ರವಾನಿಸಿದ್ದಾರೆ ಎಂದು ತಿಳಿಸಿದರು.
ಬಹುಪತ್ನಿತ್ವ ನಿಷೇಧಿಸುವ ಕಾನೂನನ್ನು ರಾಜ್ಯ ವಿಧಾನಸಭೆಯಲ್ಲಿ ತರಲು ಕಳೆದ ಸೆಪ್ಟೆಂಬರ್‌ನಲ್ಲಿ ಸರ್ಕಾರ ಘೋಷಿಸಿದ ಹಿನ್ನೆಲೆ (ಯಲ್ಲಿ) ಈ ಆದೇಶ ಹೊರಬಂದಿದೆ. ಬಹುಪತ್ನಿತ್ವ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ 149 ಜನರ ಸಲಹೆಗಳನ್ನು ಸ್ವೀಕರಿಸಿದೆ. 146 ಜನರು ಅದನ್ನು ಬೆಂಬಲಿಸಿದ್ದಾರೆ ಎಂದು ಅಸ್ಸಾಂ ಸಿಎಂ ಅಂದು ಹೇಳಿದ್ದರು.
ಬಹುಪತ್ನಿತ್ವವನ್ನು ನಿಷೇಧಿಸಲು ಮತ್ತು ಇತರ ಸಂಬಂಧಿತ ವಿಷಯಗಳಾದ ಬಾಲ್ಯವಿವಾಹ, ಸುಳ್ಳು ಗುರುತಿನ ಮೂಲಕ ಅಂತರ ಧರ್ಮೀಯ ವಿವಾಹ ತಡೆಯಲು ಸೂಕ್ತ ಕಾನೂನು ರೂಪಿಸಲು ಅಸ್ಸಾಂ ಸರ್ಕಾರ ಅಡ್ವೊಕೇಟ್ ಜನರಲ್ ದೇವಜಿತ್ ಲೋನ್ ಸೈಕಿಯಾ ಅವರ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದೆ.