ನವದೆಹಲಿ: ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಸ್ಮರಣಾರ್ಥ ಕೇಂದ್ರ ಸರ್ಕಾರವು ಪ್ರತಿ ವರ್ಷ ಆಗಸ್ಟ್ 23 ಅನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿದ್ದು ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಚಂದ್ರನ ಮೇಲ್ಮೈ ಮೇಲೆ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಲಾಗಿತ್ತು. ಈ ಮೂಲಕ ಚಂದ್ರನ ಮೇಲೆ ಇಳಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶವಾಯಿತು. ಅದೇ ಸಮಯದಲ್ಲಿ, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ.
ಅಧಿಸೂಚನೆಯ ಪ್ರಕಾರ, ಈ ದಿನವು ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ದೇಶದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು. ಇದು ಬಾಹ್ಯಾಕಾಶ ಕ್ಷೇತ್ರಕ್ಕೆ ಉತ್ತೇಜನ ನೀಡಲಿದೆ. ಯುವಕರು ಈ ಕ್ಷೇತ್ರಕ್ಕೆ ಬರಲು ಉತ್ತೇಜನ ನೀಡಲಾಗುವುದು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೊದಲ ಮಿಷನ್ ಆಗಿ ಇತಿಹಾಸವನ್ನು ಸೃಷ್ಟಿಸಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಕೆಲವೇ ದೇಶಗಳಲ್ಲಿ ಭಾರತ ಈಗ ಯುಎಸ್, ರಷ್ಯಾ ಮತ್ತು ಚೀನಾವನ್ನು ಸೇರಿಕೊಂಡಿದೆ.
ಚಂದ್ರನ ಮೇಲ್ಮೈಯಲ್ಲಿ ಇಳಿದ ನಂತರ, ಪ್ರಗ್ಯಾನ್ ಮತ್ತು ವಿಕ್ರಮ್ ಒಂದು ಚಂದ್ರನ ದಿನ ನಿರಂತರವಾಗಿ ಕೆಲಸ ಮಾಡಿತ್ತು. ಚಂದ್ರನ ಮೇಲ್ಮೈಯಿಂದ ಹಲವು ಮಹತ್ವದ ಮಾಹಿತಿಯನ್ನು ರವಾನಿಸಿತ್ತು. ಈ ಕಾರ್ಯಾಚರಣೆಯ ಯಶಸ್ಸು ಭಾರತವನ್ನು ಪ್ರಪಂಚದಾದ್ಯಂತ ಪ್ರಸಿದ್ಧಗೊಳಿಸಿತು. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸಾಮರ್ಥ್ಯಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿತು.