ನವದೆಹಲಿ: ಪಂಚರಾಜ್ಯಗಳ ವಿಧಾನಸಭೆಗೆ ಚುನಾವಣೆ ಘೋಷಣೆಯ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮತ್ತೊಂಡೆದೆ ಈ ರಾಜ್ಯಗಳಲ್ಲಿ ವಿಧಾನಸಭಾ ಕಲಾಪವು ಒಂದು ವರ್ಷಕ್ಕೆ ಸರಾಸರಿ ಮೂವತ್ತು ದಿನಗಳನ್ನೂ ದಾಟಿಲ್ಲ ಎಂಬ ಅಂಕಿಅಂಶಗಳನ್ನು ಚಿಂತಕರ ಚಾವಡಿ ತೆರೆದಿಟ್ಟಿದೆ.
ರಾಜಸ್ಥಾನವು ಒಂದು ವರ್ಷದಲ್ಲಿ ಅತಿಹೆಚ್ಚು ವಿಧಾನಸಭೆ ಕಲಾಪ ನಡೆಸಿದ ಕೀರ್ತಿಗೆ ಪಾತ್ರವಾಗಿದೆ. ಈ ರಾಜ್ಯದಲ್ಲಿ ವಾರ್ಷಿಕ ಸರಾಸರಿ 29 ದಿನಗಳ ಕಾಲ ಅಧಿವೇಶನ ನಡೆದಿದೆ. ತೆಲಂಗಾಣದಲ್ಲಿ ಕಲಾಪವು ಕೇವಲ 15 ದಿನಗಳಿಗೆ ಸೀಮಿತಗೊಂಡಿದೆ ಎಂದು ಕಲಾಪ ಕುರಿತ ಚಿಂತನಾ ಸಂಸ್ಥೆಯಾದ ಪಿಆರ್‌ಎಸ್ ಶಾಸಕಾಂಗ ಸಂಶೋಧನಾ ವರದಿ ತಿಳಿಸಿದೆ.
2019ರಿಂದ 2023ರ ನಡುವೆ ಛತ್ತೀಸಗಢದಲ್ಲಿ ಒಂದು ವರ್ಷಕ್ಕೆ ಸರಾಸರಿ 23 ದಿನಗಳಷ್ಟೇ ಕಲಾಪ ನಡೆದಿದೆ. ಸರಾಸರಿ ಅವಧಿಯು ಕೇವಲ ಐದು ಗಂಟೆ ಆಗಿದೆ ಎಂದು ಹೇಳಿದೆ.
ಮಧ್ಯಪ್ರದೇಶದಲ್ಲಿ 16 ದಿನಗಳ ಕಾಲ ಅಧಿವೇಶನ ನಡೆದರೆ, ದಿನವೊಂದರ ಸರಾಸರಿ ಅವಧಿ ನಾಲ್ಕು ಗಂಟೆಗೆ ಸೀಮಿತಗೊಂಡಿದೆ. ಮಿಜೋರಾಂನಲ್ಲಿ 18 ದಿನ ಕಲಾಪ ನಡೆದಿದ್ದು, ಶಾಸಕರು ಸರಾಸರಿ ಐದು ಗಂಟೆ ಕಾಲವಷ್ಟೇ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನುತ್ತದೆ ವರದಿ.
ರಾಜಸ್ಥಾನದಲ್ಲಿ ಅತಿಹೆಚ್ಚು ಶಾಸಕರು ಕಲಾಪದಲ್ಲಿ ಪಾಲ್ಗೊಂಡ ಹಿರಿಮೆ ಹೊಂದಿದ್ದಾರೆ. ದಿನವೊಂದಕ್ಕೆ ಸರಾಸರಿ ಏಳು ಗಂಟೆ ಕಾಲ, ರಾಜ್ಯದ ಗಮನಾರ್ಹ ವಿಷಯಗಳ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದೆ.
ರಾಜಸ್ಥಾನ ವಿಧಾನಸಭೆಯ ಆರಂಭದ ಹತ್ತು ವರ್ಷಗಳ ಅವಧಿಯಲ್ಲಿ ಒಂದು ವರ್ಷಕ್ಕೆ ಸರಾಸರಿ 59 ದಿನಗಳ ಕಾಲ ಕಲಾಪ ನಡೆದಿರುವ ನಿದರ್ಶನವಿದೆ. ಮಧ್ಯಪ್ರದೇಶದಲ್ಲಿ ಇದೇ ಅವಧಿಯಲ್ಲಿ 48 ದಿನಗಳ ಕಾಲ ಅಧಿವೇಶನ ನಡೆದಿದೆ. ಆದರೆ, ಕಳೆದ ಒಂದು ದಶಕದ ಅವಧಿಯಲ್ಲಿ ಕಲಾಪದ ದಿನಗಳು ಇಳಿಕೆಯಾಗಿರುವುದಕ್ಕೆ ಅಂಕಿಅಂಶಗಳು ಕನ್ನಡಿ ಹಿಡಿದಿವೆ. ರಾಜಸ್ಥಾನದಲ್ಲಿ ಕಲಾಪದ ದಿನಗಳ ಸಂಖ್ಯೆ 29ಕ್ಕೆ ಇಳಿದರೆ, ಮಧ್ಯಪ್ರದೇಶದಲ್ಲಿ 21 ದಿನಗಳಿಗೆ ಕುಸಿದಿದೆ.
ಅಂದಹಾಗೆ ತೆಲಂಗಾಣದಲ್ಲಿ 2017ರ ವೇಳೆ 37 ದಿನಗಳ ಕಾಲ ಕಲಾಪ ನಡೆದ ದಾಖಲೆಯೂ ಇದೆ. ಆ ನಂತರದ ವರ್ಷಗಳಲ್ಲಿ ಅಧಿವೇಶನದ ವಾರ್ಷಿಕ ಸರಾಸರಿ ಪ್ರಮಾಣ 20 ದಿನಗಳಿಗೆ ಸೀಮಿತಗೊಂಡಿದೆ.
ಡೆಪ್ಯುಟಿ ಸ್ಪೀಕರ್ ನೇಮಿಸಿಲ್ಲ: ರಾಜಸ್ಥಾನ ವಿಧಾನಸಭೆಯ ಇಡೀ ಅವಧಿಯಲ್ಲಿ ಡೆಪ್ಯುಟಿ ಸ್ಪೀಕರ್ ಅವರನ್ನೇ ನೇಮಿಸಿಲ್ಲ. 2020ರಿಂದ ಮಧ್ಯಪ್ರದೇಶದಲ್ಲಿಯೂ ಡೆಪ್ಯುಟಿ ಸ್ಪೀಕರ್ ನೇಮಿಸಿಲ್ಲ ಎಂದು ವರದಿ ಹೇಳಿದೆ.
ಛತ್ತೀಸಗಢ ವಿಧಾನಸಭೆಯಲ್ಲಿ ಶೇ 17ರಷ್ಟು ಶಾಸಕಿಯರಿದ್ದರೆ, ರಾಜಸ್ಥಾನದಲ್ಲಿ ಶೇ 13 ಹಾಗೂ ಮಧ್ಯಪ್ರದೇಶದಲ್ಲಿ ಶೇ 10ರಷ್ಟಿದ್ದಾರೆ ಎಂದು ತಿಳಿಸಿದೆ.
ಛತ್ತೀಸಗಢದಲ್ಲಿ ಕಲಾಪಕ್ಕೆ ಶಾಸಕಿಯರ ಹಾಜರಾತಿ ಪ್ರಮಾಣ ಶೇ 93ರಷ್ಟಿದ್ದರೆ, ಶಾಸಕರ ಹಾಜರಾತಿ ಶೇ 88ರಷ್ಟಿದೆ. ಮಧ್ಯಪ್ರದೇಶದಲ್ಲಿ ಶಾಸಕಿಯರ ಹಾಜರಾತಿ ಶೇ 79ರಷ್ಟಿದ್ದರೆ, ಶಾಸಕರ ಹಾಜರಾತಿ 81ರಷ್ಟಿದೆ. ರಾಜಸ್ಥಾನದಲ್ಲಿ ಶಾಸಕಿಯರ ಹಾಜರಾತಿ ಶೇ 77ರಷ್ಟು ಹಾಗೂ ಶಾಸಕರ ಹಾಜರಾತಿ 82ರಷ್ಟಿದೆ ಎಂದು ವರದಿ ವಿವರಿಸಿದೆ.
ಎಷ್ಟು ಮಸೂದೆಗೆ ಅಂಗೀಕಾರ?
ಈ ಐದು ರಾಜ್ಯಗಳ ವಿಧಾನಸಭೆಗಳಲ್ಲಿ (ಐದು ವರ್ಷಗಳಲ್ಲಿ) ಮಂಡನೆಯಾದ ಮಸೂದೆಗಳಿಗೆ ಅಂಗೀಕಾರ ನೀಡಿದ ಪ್ರಮಾಣ ಶೇ 48ರಷ್ಟಿದೆ. ವಿಜೋರಾಂನಲ್ಲಿ 57 ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿದೆ. 2020ರ ವರದಿ ಪ್ರಕಾರ ಛತ್ತೀಸಗಢ ವಿಧಾನಸಭೆಯಲ್ಲಿ 6 ಗಂಟೆ ಕಾಲ ನಡೆದ ಕಲಾಪದಲ್ಲಿ 14 ಮಸೂದೆಗಳಿಗೆ ಅಂಕಿತ ದೊರೆತ ನಿದರ್ಶನವಿದೆ.
2022ರಲ್ಲಿ ಮಧ್ಯಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆದ ಅಧಿವೇಶನದಲ್ಲಿ 13 ಮಸೂದೆಗಳಿಗೆ ಅಂಗೀಕಾರ ನೀಡಲಾಗಿತ್ತು ಎಂದು ವರದಿ ವಿವರಿಸಿದೆ. ಅಲ್ಲದೇ ಈ ಎರಡು ರಾಜ್ಯಗಳಲ್ಲಿ ಅತಿಹೆಚ್ಚು ಸುಗ್ರೀವಾಜ್ಞೆಗಳನ್ನು ಅಂಗೀಕರಿಸಲಾಗಿದೆ. 2019ರಿಂದ 2023ರ ನಡುವೆ ಮಧ್ಯಪ್ರದೇಶದಲ್ಲಿ 39 ಸುಗ್ರೀವಾಜ್ಞೆಗಳಿಗೆ ಒಪ್ಪಿಗೆ ಸಿಕ್ಕಿದೆ. ಉಳಿದಂತೆ ತೆಲಂಗಾಣ 14 ಹಾಗೂ ರಾಜಸ್ಥಾನದಲ್ಲಿ 13 ಸುಗ್ರೀವಾಜ್ಞೆಗಳಿಗೆ ಅಂಗೀಕಾರ ದೊರೆತಿದೆ.