ಜೆರುಸಲೇಂ: ಇಸ್ರೇಲ್ ಹಾಗೂ ಪಾಲೆಸ್ಟೀನ್ ನಡುವಿನ ಸಂಘರ್ಷ ಯುದ್ಧದ ಸ್ವರೂಪವನ್ನು ಪಡೆದಿದ್ದು, ಎರಡೂ ಕಡೆಗಳಿಂದ ನಡೆದ ದಾಳಿ, ಪ್ರತಿದಾಳಿಯಲ್ಲಿ 300ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.
ಪಾಲೆಸ್ಟೀನ್‌ನ ಹಮಾಸ್ ಬಂಡುಕೋರರು ಶನಿವಾರ ನಸುಕಿನಲ್ಲಿ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ನಡೆಸಿದ ದಿಢೀರ್ ರಾಕೆಟ್ ದಾಳಿಗೆ ಕನಿಷ್ಠ 100 ಮಂದಿ ಸಾವಿಗೀಡಾದರೆ, ಇಸ್ರೇಲ್ ನಡೆಸಿದ ಪ್ರತಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿನ ಕನಿಷ್ಠ 200 ಜನರ ಹತ್ಯೆಯಾಗಿದೆ.
ಇಸ್ರೇಲ್‌ನ ಕೆಲವು ಸೈನಿಕರು ಮತ್ತು ನಾಗರಿಕರನ್ನು ಹಮಾಸ್ ಬಂಡುಕೋರರು ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.
ಇಸ್ರೇಲ್‌ನಲ್ಲಿ ಶನಿವಾರ ಯೆಹೂದಿಗಳ ವಿಶೇಷ ಆಚರಣೆಗಾಗಿ ರಜೆ ಇತ್ತು. ಈ ಸಂದರ್ಭದಲ್ಲೇ ಭೂ, ಜಲ ಮತ್ತು ವಾಯು ಮಾರ್ಗದ ಮೂಲಕ ಬಂಡುಕೋರರು ದಾಳಿ ಎಸಗಿದ್ದಾರೆ. ದೇಶದ ದಕ್ಷಿಣ ಭಾಗದ ಮೂಲಕ ಒಳ ನುಸುಳಿದ್ದಾರೆ. ಅನೇಕ ಸೈನಿಕರು ಮತ್ತು ಜನರನ್ನು ವಶಕ್ಕೆ ಪಡೆದು ಗಾಜಾ ಪಟ್ಟಿಯತ್ತ ಕರೆದೊಯ್ದಿದ್ದಾರೆ.
'ಪ್ಯಾಲೆಸ್ಟೀನಿಯ್ನರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಇಸ್ರೇಲ್ ಅನ್ನು ಒತ್ತಾಯಿಸಲು ಇಸ್ರೇಲ್‌ನ ಹಿರಿಯ ಅಧಿಕಾರಿಗಳು ಸೇರಿ ಅನೇಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದೇವೆ ಎಂದು ಹಮಾಸ್‌ನ ಉಪ ಮುಖ್ಯಸ್ಥ ಸಲೇಹ್ ಅಲ್ ಅರೌರಿ 'ಅಲ್ ಜಝೀರಾ' ಸುದ್ದಿ ವಾಹಿನಿಗೆ ತಿಳಿಸಿದ್ದಾನೆ.
'ದೇಶವು ಯುದ್ಧ ಎದುರಿಸುತ್ತಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದು, ವೈರಿಗಳು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಅನೇಕ ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ದೇಶ ಕಂಡ ಅತಿ ದೊಡ್ಡ ವಿಧ್ವಂಸಕ ಕೃತ್ಯ ಇದಾಗಿದೆ ಎಂದು ಇಸ್ರೇಲ್‌ನ ರಾಷ್ಟ್ರೀಯ ರಕ್ಷಣಾ ಸೇವಾ ಪಡೆ ಹೇಳಿದೆ.
ಇಸ್ರೇಲ್‌ನತ್ತ 5000 ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ಗಾಜಾ ಪಟ್ಟಿ ಮೇಲೆ ನಿಯಂತ್ರಣ ಹೊಂದಿರುವ ಇಸ್ಲಾಮಿಕ್ ಗುಂಪು ಹಮಾಸ್ ಹೇಳಿಕೊಂಡಿದೆ. ದಾಳಿಯನ್ನು 'ಆಪರೇಷನ್ ಅಲ್ - ಅಕ್ಸಾ ಫ್ಲಡ್' ಎಂದು ಕರೆದಿದೆ.