ನವದೆಹಲಿ: ಚುನಾವಣಾ ಬಾಂಡ್ ಯೋಜನೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಅಕ್ಟೋಬರ್ 31ರಂದು ನಡೆಸಲಿದೆ.
ನವದೆಹಲಿ: ಚುನಾವಣಾ ಬಾಂಡ್ ಯೋಜನೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಅಕ್ಟೋಬರ್ 31ರಂದು ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರುಗಳಿದ್ದ ನ್ಯಾಯಪೀಠವು ಮಂಗಳವಾರ ಪ್ರಕರಣದ ವಿಚಾರಣೆಗೆ ದಿನ ನಿಗದಿಪಡಿಸಿತು.
ಲೋಕಸಭೆಯ 2024ರ ಸಾರ್ವತ್ರಿಕ ಚುನಾವಣೆಗಾಗಿ ಚುನಾವಣಾ ಬಾಂಡ್ ಯೋಜನೆಯು ಆರಂಭವಾಗುವ ಮೊದಲೇ ಈ ಅರ್ಜಿಯ ವಿಚಾರಣೆ ನಡೆಸಬೇಕು ಎಂಬ ವಕೀಲ ಪ್ರಶಾಂತ್ ಭೂಷಣ್ ಅವರ ನಿವೇದನೆಯನ್ನು ಪೀಠವು ಗಮನಕ್ಕೆ ತೆಗೆದುಕೊಂಡಿತು.
ಬಾಂಡ್ ಹೆಸರಿನಲ್ಲಿ ರಾಜಕೀಯ ಪಕ್ಷಗಳಿಗೆ ಅಜ್ಞಾತವಾಗಿ ದೇಣಿಗೆಯನ್ನು ನೀಡುವುದು ಭ್ರಷ್ಟಾಚಾರಕ್ಕೆ ದಾರಿಯಾಗಲಿದೆ. ಭ್ರಷ್ಟಾಚಾರ ಮುಕ್ತ ದೇಶ ಹೊಂದುವ ನಾಗರಿಕರ ಹಕ್ಕುಗಳ ಉಲ್ಲಂಘನೆಯೂ ಆಗಲಿದೆ ಎಂದು ಪ್ರಶಾಂತ್ ಭೂಷಣ್ ಪ್ರತಿಪಾದಿಸಿದರು. ಪ್ರಕರಣದಲ್ಲಿ ಅವರು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಘಟನೆಯನ್ನು ಪ್ರತಿನಿಧಿಸುತ್ತಿದ್ದಾರೆ.