ನವದೆಹಲಿ: ರಾಷ್ಟ್ರ ನಿರ್ಮಾಣದ ವಿವಿಧ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸುವಂತೆ ಯುವಜನರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಅ.31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ರಾಷ್ಟ್ರವ್ಯಾಪಿ 'ಮೇರಾ ಯುವ ಭಾರತ್' ವೇದಿಕೆ ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ.
'ಮನ್ ಕಿ ಬಾತ್' ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಮೇರಾ ಯುವ ಭಾರತ್' ವೆಬ್‌ಸೈಟ್ ಸಹ ಪ್ರಾರಂಭಿಸಲಾಗುವುದು. ಯುವಕರು MYBharat.Gov.inನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
'ಮೈಭಾರತ್ ದೇಶದ ಯುವಕರಿಗೆ ರಾಷ್ಟ್ರ ನಿರ್ಮಾಣದ ವಿವಿಧ ಕಾರ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಅವಕಾಶ ಕಲ್ಪಿಸಲಿದೆ. ಇದು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ದೇಶದ ಯುವ ಶಕ್ತಿಯನ್ನು ಸಂಯೋಜಿಸುವ ಒಂದು ಅನನ್ಯ ಪ್ರಯತ್ನ' ಎಂದು ಪ್ರಧಾನಿ ಹೇಳಿದರು.
ಅ.31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಸಹ ಇದೆ ಎಂದು ಸ್ಮರಿಸಿದ ಮೋದಿ, ಇಂದಿರಾ ಗಾಂಧಿಯವರಿಗೆ 'ಮನ್ ಕಿ ಬಾತ್'ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಸ್ಥಳೀಯತೆಯನ್ನು ಉತ್ತೇಜಿಸುವ ತಮ್ಮ 'ವೋಕಲ್ ಫಾರ್ ಲೋಕಲ್' ಹೇಳಿಕೆ ಪುನರುಚ್ಚರಿಸಿದ ಮೋದಿ, 'ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ 'ವೋಕಲ್' ಫಾರ್ ಲೋಕಲ್‌ಗೆ ಆದ್ಯತೆ ನೀಡಬೇಕು. ನೀವು ಪ್ರವಾಸ ಅಥವಾ ತೀರ್ಥಯಾತ್ರೆಗೆ ಹೋದ ಕಡೆಗಳಲ್ಲೆಲ್ಲಾ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ' ಎಂದು ಮನವಿ ಮಾಡಿದರು.
ಗಾಂಧಿ ಜಯಂತಿ ವೇಳೆ ಖಾದಿ ಉತ್ಪನ್ನಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಕನಾಟ್‌ನ ಮಳಿಗೆಯೊಂದರಲ್ಲೇ ಒಂದೇ ದಿನದಲ್ಲಿ ₹1.25 ಕೋಟಿ ಮೊತ್ತದ ಉತ್ಪನ್ನಗಳು ಮಾರಾಟವಾಗಿವೆ. ಖಾದಿ ಉತ್ಪನ್ನಗಳ ಮಾರಾಟವು ಈ ಹಿಂದೆ ಕೇವಲ ₹30,000 ಕೋಟಿ ಇತ್ತು. ಈಗ ಅದು ಸುಮಾರು ₹1.25 ಲಕ್ಷ ಕೋಟಿಗೆ ಏರಿದೆ ಎಂದು ಅವರು ಹೇಳಿದರು.
ಬರುವ ದೀಪಾವಳಿ ಹಬ್ಬದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಕುಶಲಕರ್ಮಿಗಳ ಜೀವನದಲ್ಲೂ ಹಬ್ಬದ ಹೊಳಪು ಕಾಣಿಸುತ್ತದೆ ಎಂದು ಮೋದಿ ಹೇಳಿದರು.
ಇದೇ ವೇಳೆ ಅವರು, ವಹಿವಾಟಿಗೆ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೇ ಬಳಸುವಂತೆ ಇತರರಿಗೂ ಸಲಹೆ ನೀಡಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.
ರಾಜಧಾನಿಯಲ್ಲಿ ಅಮೃತ ವಾಟಿಕಾ ನಿರ್ಮಾಣ
ಸ್ವಾತಂತ್ರ್ಯದ ಅಮೃತ ಮಹೋತ್ಸವದ (ಆಜಾದಿ ಕಾ ಅಮೃತ ಮಹೋತ್ಸವ) ನಿಮಿತ್ತ ದೇಶದಾದ್ಯಂತ ಮಣ್ಣು ಸಂಗ್ರಹಿಸಲು ಅಮೃತ ಕಲಶ ಯಾತ್ರೆಗಳನ್ನು ಆಯೋಜಿಸಲಾಗಿತ್ತು. ಈ ಯಾತ್ರೆಗಳು ಇದೀಗ ದೆಹಲಿ ತಲುಪುತ್ತಿದ್ದು ಸಂಗ್ರಹಿಸಿದ ಮಣ್ಣನ್ನು ಅಮೃತ ವಾಟಿಕಾ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಮೋದಿ ತಿಳಿಸಿದರು. 'ಇದು ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ಅಮೃತ ಮಹೋತ್ಸವದ ಭವ್ಯ ಪರಂಪರೆಯಾಗಿ ಉಳಿಯುತ್ತದೆ. ದೇಶದಾದ್ಯಂತ ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವವು ಅ.31 ಸಮಾಪನವಾಗಲಿದೆ' ಎಂದು ಹೇಳಿದರು. ಕ್ರೀಡಾಪಟುಗಳಿಗೆ ಪ್ರಶಂಸೆ: ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತವು 75 ಚಿನ್ನ ಸೇರಿ 200 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಬಗ್ಗೆ ಪ್ರಶಂಸಿಸಿದ ಮೋದಿ ಅಂಗವಿಕಲರ ಕ್ರೀಡಾಕೂಟದಲ್ಲಿ ದೇಶದ ಹಲವು ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದರು ಎಂದು ಶ್ಲಾಘಿಸಿದ್ದಾರೆ.
ಬಿರ್ಸಾ ಮುಂಡಾ ಸ್ಮರಿಸಿದ ಮೋದಿ
ಆದಿವಾಸಿ ಜನರ ಆರಾಧ್ಯ ನಾಯಕ ಬಿರ್ಸಾ ಮುಂಡಾ ಅವರಿಗೂ 'ಮನ್ ಕಿ ಬಾತ್'ನಲ್ಲಿ ಗೌರವ ನಮನ ಸಲ್ಲಿಸಿದ ಪ್ರಧಾನಿ ನ.15 ರಂದು ಮುಂಡಾ ಅವರ ಜನ್ಮದಿನವನ್ನು 'ಜನಜಾತಿಯ ಗೌರವ ದಿವಸ'ವಾಗಿ ಆಚರಿಸಲಾಗುತ್ತದೆ. ಬುಡಕಟ್ಟು ಸಮಾಜಕ್ಕೆ ಸ್ಫೂರ್ತಿ ನೀಡಿದ ರಾಣಿ ದುರ್ಗಾವತಿ ಅವರ 500ನೇ ಜಯಂತಿಯನ್ನು ದೇಶವು ಪ್ರಸ್ತುತ ಆಚರಿಸುತ್ತಿದೆ ಎಂದು ತಿಳಿಸಿದರು. 'ನಿಜವಾದ ಧೈರ್ಯ ಮತ್ತು ದೃಢಸಂಕಲ್ಪದ ಅರ್ಥವೇನೆಂಬುದನ್ನು ಬಿರ್ಸಾ ಮುಂಡಾ ಅವರ ಬದುಕಿನಿಂದ ನಾವು ಕಲಿಯಬಹುದು. ಅವರು ಎಂದಿಗೂ ವಿದೇಶಿ ಆಡಳಿತವನ್ನು ಒಪ್ಪಿರಲಿಲ್ಲ. ಅವರು ಅನ್ಯಾಯಕ್ಕೆ ಅವಕಾಶವೇ ಇಲ್ಲದ ಸಮಾಜವನ್ನು ರೂಪಿಸಿದರು. ಪ್ರತಿ ವ್ಯಕ್ತಿಗೆ ಘನತೆ ಮತ್ತು ಸಮಾನತೆಯ ಜೀವನ ಸಿಗಬೇಕೆಂದು ಅವರು ಬಯಸಿದ್ದರು' ಎಂದು ಮೋದಿ ಸ್ಮರಿಸಿದರು. ತಿಲ್ಕಾ ಮಾಂಝಿ ಸಿಧೋ ಮತ್ತು ಕನ್ಹು ತಾಂತಿಯಾ ಭೀಲ್ ಅವರಂತಹ ಅನೇಕ ಪ್ರಮುಖ ಆದಿವಾಸಿ ವೀರರ ಹೆಸರನ್ನು ಸ್ಮರಿಸಿದ ಮೋದಿ ದೇಶವು ಬುಡಕಟ್ಟು ವೀರರ ಶ್ರೀಮಂತ ಇತಿಹಾಸ ಹೊಂದಿದೆ. ರಾಷ್ಟ್ರದ ಸ್ವಾಭಿಮಾನ ಮತ್ತು ಉನ್ನತಿಯಲ್ಲಿ ಮಹತ್ವ ಪಡೆದಿರುವ ಬುಡಕಟ್ಟು ಸಮಾಜಕ್ಕೆ ದೇಶವು ಆಭಾರಿಯಾಗಿದೆ ಎಂದು ಅವರು ಹೇಳಿದರು.
ವೇಸ್ಟ್ ಟು ವೆಲ್ತ್' ಸೃಷ್ಟಿಗೂ ಸಲಹೆ
ಗುಜರಾತಿನ ಪ್ರಸಿದ್ಧ ಯಾತ್ರಾಸ್ಥಳ ಅಂಬಾ ಜಿ ಮಂದಿರ ಉಲ್ಲೇಖಿಸಿದ ಪ್ರಧಾನಿ ರದ್ದಿ ತುಣುಕುಗಳಿಂದ ಮಾಡಿದ ಶಿಲ್ಪಗಳು ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಗಮನ ಸೆಳೆಯುತ್ತವೆ. ಈ ಪ್ರತಿಮೆಗಳು ಭಕ್ತರ ಆಕರ್ಷಣೀಯ ಕೇಂದ್ರವೂ ಆಗಿವೆ ಎಂದರು. ತ್ಯಾಜ್ಯದಿಂದ ಕಲಾಕೃತಿಗಳನ್ನು ತಯಾರಿಸುವಲ್ಲಿ ಪ್ರಾವಿಣ್ಯತೆ ಸಾಧಿಸಿರುವವವರನ್ನು ಆಹ್ವಾನಿಸಿ ಸ್ಪರ್ಧೆ ಆಯೋಜಿಸುವಂತೆ ಗುಜರಾತ್ ಸರ್ಕಾರಕ್ಕೆ ಸಲಹೆ ನೀಡಿದರು. ಇದು ದೇಶದಾದ್ಯಂತ 'ವೇಸ್ಟ್ ಟು ವೆಲ್ತ್ (ತಾಜ್ಯದಿಂದ ಸಂಪತ್ತು)' ಅಭಿಯಾನಕ್ಕೆ ಜನರನ್ನು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.