ನವದೆಹಲಿ: ಮೂರು ತಿಂಗಳ ಹಸುಳೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ವ್ಯಕ್ತಿಗೆ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದಲ್ಲಿ ವ್ಯಕ್ತಿಗೆ ತನ್ನನ್ನು ಸಮರ್ಥನೆ ಮಾಡಿಕೊಳ್ಳಲು ಸರಿಯಾದ ಅವಕಾಶ ನೀಡದೆ 'ತರಾತುರಿ'ಯಲ್ಲಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಪ್ರಕರಣ ಕುರಿತು ಹೊಸದಾಗಿ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.
2018ರಲ್ಲಿ ದಾಖಲಾದ ದೂರಿನ ಕುರಿತು ಆರೋಪಪಟ್ಟಿ ಸಲ್ಲಿಸಿದ 15 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಲಾಗಿದೆ. ಹಲವು ಅಪರಾಧಗಳಲ್ಲಿ ವ್ಯಕ್ತಿಯನ್ನು ದೋಷಿ ಎಂದು ನಿರ್ಣಯಿಸಿ, ಮರಣದಂಡನೆ ವಿಧಿಸಲಾಗಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯವು ತರಾತುರಿಯಲ್ಲಿ ವಿಚಾರಣೆ ಪೂರ್ಣಗೊಳಿಸಿದೆ ಮತ್ತು ಸಮರ್ಥನೆ ಮಾಡಿಕೊಳ್ಳಲು ಆರೋಪಿಗೆ ಸರಿಯಾದ ಅವಕಾಶ ನೀಡಿಲ್ಲ ಎಂಬುದಾಗಿ ಪರಿಗಣಿಸುತ್ತೇವೆ' ಎಂದು ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠವು ತಿಳಿಸಿದೆ.
'ಯಾವುದೇ ಪ್ರಕರಣದಲ್ಲಿ ಆರೋಪಿಗೆ ತನ್ನನ್ನು ಸಮರ್ಥಿಸಿಕೊಳ್ಳಲು ಸರಿಯಾದ ಅವಕಾಶ ನೀಡದಿರುವುದು ಅರ್ಥಹೀನ ಮತ್ತು ನಾಟಕೀಯ ವಿಚಾರಣೆಯಾಗುತ್ತದೆ' ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿತು.
'ಹೀಗಾಗಿ ವ್ಯಕ್ತಿಯನ್ನು ದೋಷಿ ಎಂದು ನಿರ್ಧರಿಸಿ, ಶಿಕ್ಷೆ ಪ್ರಕಟಿಸಿರುವುದು ಮತ್ತು ಆ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಲಾಗುತ್ತಿದೆ. ಪ್ರಕರಣದಲ್ಲಿ ಆರೋಪಿಗೆ ಸಮರ್ಥನೆ ಮಾಡಿಕೊಳ್ಳಲು ಸರಿಯಾದ ಅವಕಾಶ ನೀಡಬೇಕು' ಎಂದು ಅ.19ರಂದು ಹೇಳಿದೆ.
ಅತ್ಯಾಚಾರ, ಕೊಲೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನವೀನ್ ಅವರನ್ನು ದೋಷಿ ಎಂದು ನಿರ್ಧರಿಸಿ ಇಂದೋರ್‌ನ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಈ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ 2018ರ ಡಿಸೆಂಬರ್‌ನಲ್ಲಿ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ನವೀನ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ವಕೀಲರು, 'ಪ್ರಕರಣದ ವಿಚಾರಣೆಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. 2018ರ ಏಪ್ರಿಲ್ 27ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು. ಅದೇ ವರ್ಷ ಮೇ 12ರಂದು ವಿಚಾರಣಾ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು' ಎಂದು ಹೇಳಿದರು.
'ನ್ಯಾಯಾಲಯದ ಆದೇಶ ಪ್ರತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ತನ್ನನ್ನು ಸಮರ್ಥಿಸಿಕೊಳ್ಳಲು ಬೇಕಾದ ವಕೀಲರನ್ನು ಆಯ್ಕೆ ಮಾಡಿಕೊಳ್ಳಲು ಆರೋಪಿಗೆ ಅವಕಾಶ ನೀಡಿಲ್ಲ. ಬದಲಾಗಿ ಕಾನೂನು ನೆರವು ಸಮಿತಿ ಒದಗಿಸುವ ವಕೀಲರ ಸಹಾಯ ಪಡೆಯುವುದಾಗಿ ಆರೋಪಿಯೇ ಹೇಳಿದ ರೀತಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ' ಎಂದು ತಿಳಿಸಿದರು.
ಆಗ ನ್ಯಾಯಪೀಠವು, 'ನಮ್ಮ ಪ್ರಕಾರ ನ್ಯಾಯಯೋಚಿತ ಮತ್ತು ನಿಷ್ಪಕ್ಷಪಾತ ವಿಚಾರಣೆಯೇ ನ್ಯಾಯಾಂಗ ವ್ಯವಸ್ಥೆಯ ತಿರುಳು. ತರ್ಕಬದ್ಧವಾಗಿ ಮತ್ತು ಗೊಂದಲಕ್ಕೆ ಆಸ್ಪದ ನೀಡದಂತೆ ವಿಚಾರಣೆ ನಡೆಸಿ ನ್ಯಾಯನಿರ್ಣಯ ಮಾಡುವುದೇ ನ್ಯಾಯಾಧೀಶನ ಜವಾಬ್ದಾರಿ. ಅದಕ್ಕಾಗಿ ಪ್ರತಿಯೊಂದು ಸಾಕ್ಷಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅಳೆದುತೂಗಿ ನ್ಯಾಯನಿರ್ಣಯ ಮಾಡಬೇಕಾಗುತ್ತದೆ' ಎಂದು ಹೇಳಿತು.
ನಂತರ ವ್ಯಕ್ತಿ ಪರವಾಗಿ ವಾದ ಮಂಡಿಸಲು ಹಿರಿಯ ವಕೀಲರನ್ನು ಒದಗಿಸಬೇಕು ಎಂದು ಇಂದೋರ್ ವಿಚಾರಣಾ ನ್ಯಾಯಾಲಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು.