ಪಟ್ನಾ (PTI): ಬಿಹಾರದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬೋಧನೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ 22 ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆಯೇ ಗೈರುಹಾಜರಾಗಿದ್ದ 2,081 ಶಿಕ್ಷಕರ ವೇತನವನ್ನು ಕಡಿತಗೊಳಿಸಲಾಗಿದೆ.

ಶಿಕ್ಷಕರ ನೇಮಕಾತಿ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪಕ್ಕಾಗಿ 17 ಶಿಕ್ಷಕರನ್ನು ವಜಾಗೊಳಿಸುವಂತೆಯೂ ಶಿಕ್ಷಣ ಇಲಾಖೆ ಶಿಫಾರಸು ಮಾಡಿದೆ.
ಶಿಕ್ಷಕರು, ಅಧಿಕಾರಿಗಳ ಅನುಮತಿ ಇಲ್ಲದೆ ರಜಾ ತೆಗೆದುಕೊಂಡಿರುವುದು ಶಾಲೆಗಳಲ್ಲಿ ಪರಿಶೀಲನೆ ನಡೆಸಿದ ವೇಳೆ ಪತ್ತೆಯಾಗಿದ್ದು, ಇನ್ನೂ 590 ಶಿಕ್ಷಕರ ಸಂಬಳ ಕಡಿತಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಸರ್ಕಾರಿ ಶಾಲೆಗಳಲ್ಲಿ ಗೈರು ಹಾಜರಾದ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರನ್ನು ಕೈಬಿಡುವ ಶಿಕ್ಷಣ ಇಲಾಖೆಯ ಕ್ರಮವು ಈಗಾಗಲೇ ಭಾರಿ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಈ ಕ್ರಮವನ್ನು ವಿರೋಧಪಕ್ಷ ಬಿಜೆಪಿ ಖಂಡಿಸಿದ್ದು, ಈ ಆದೇಶವನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದೆ.
'ಸಂಬಳ ಕಡಿತ, ಶಿಕ್ಷಕರ ಅಮಾನತು ಮತ್ತು ವಜಾ ಆದೇಶಗಳನ್ನು ಕೂಡಲೇ ರದ್ದುಗೊಳಿಸಬೇಕು' ಎಂದು ಟಿಇಟಿ ಪ್ರಾಥಮಿಕ ಶಿಕ್ಷಕರ ಸಂಘದ ಸಂಚಾಲಕ ರಾಜು ಸಿಂಗ್ ಒತ್ತಾಯಿಸಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಕೆ. ಪಾಠಕ್ ಅವರ ನಿರ್ದೇಶನದ ಬಳಿಕ ಜುಲೈ 1ರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಪರಿಶೀಲನೆ ನಡೆದಿತ್ತು.