ಮಂಗಳೂರು: ಉಡುಪಿ-ಕಾಸರಗೋಡು 400 ಕೆ.ವಿ ಟೈ-ಟೆನ್ಷನ್ ವಿದ್ಯುತ್ ಪ್ರಸರಣ ಮಾರ್ಗವನ್ನು ಕೃಷಿ ಭೂಮಿಯಲ್ಲಿ ಅಳವಡಿಸುವುದಕ್ಕೆ ಮಂಗಳೂರು ಹಾಗೂ ಬಂಟ್ವಾಳ ತಾಲ್ಲೂಕಿನ ಕೃಷಿಕರು ವಿರೋಧ ವ್ಯಕ್ತಪಡಿಸಿದ್ದು, ವಿದ್ಯುತ್ ಮಾರ್ಗವನ್ನು ಅಳವಡಿಸಲು ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷಿಕರ ಬೇಡಿಕೆಯನ್ನು ಬೆಂಬಲಿಸಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ, 'ರೈತರನ್ನು ವಿಶ್ವಾಸಕ್ಕೆ ಪಡೆಯದೆಯೇ ವಿದ್ಯುತ್ ಮಾರ್ಗವನ್ನು ಅಳವಡಿಸಲಾಗುತ್ತಿದೆ. ಇದನ್ನು ವಿರೋಧಿಸಿ ರೈತರು 400 ಕೆ.ವಿ. ವಿದ್ಯುತ್ ಮಾರ್ಗ ವಿರೋಧಿ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಸರ್ವೆ ನಡೆಸಲು ಅವಕಾಶ ನೀಡುತ್ತಿಲ್ಲ. ಇದು ಸಂಪತ್ತು ಉಳಿಸುವ ಹೋರಾಟ ಮಾತ್ರವಲ್ಲ, ಕೃಷಿಕರ ಜೀವನ್ಮರಣದ ಹೋರಾಟ' ಎಂದರು.
'ಈ ಯೋಜನೆಯಿಂದ ರೈತರಿಗೆ ಮಾತ್ರವಲ್ಲ ವನ್ಯಸಂಕುಲಕ್ಕೂ ಹಾನಿ ಉಂಟಾಗುತ್ತದೆ. ವೀರಕಂಭ ಗ್ರಾಮದಲ್ಲಿ ಮೀಸಲು ಅರಣ್ಯದಲ್ಲಿ 600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಿರುವ ಸಿರಿಚಂದನವನಕ್ಕೂ ಹಾನಿಯಾಗಲಿದೆ' ಎಂದು ತಿಳಿಸಿದರು.
'ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಲಭ್ಯವಿರುವ 40 ಮೀ. ಜಾಗದಲ್ಲಿ ನೆಲದಡಿ ವಿದ್ಯುತ್ ಕೇಬಲ್ ಅಳವಡಿಸಬಹುದು. ಸಮುದ್ರದಲ್ಲಿ ವಿದ್ಯುತ್ ಮಾರ್ಗವನ್ನು ಅಳವಡಿಸಬಹುದು ಎಂಬುದು ರೈತರ ಸಲಹೆ. ಇದನ್ನು ಪರಿಗಣಿಸಬೇಕು' ಎಂದು ಅವರು ಒತ್ತಾಯಿಸಿದರು.
'ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕಿನಲ್ಲಿ ಸಣ್ಣ ಹಿಡುವಳಿಯ ರೈತರೇ ಜಾಸ್ತಿ. ಇರುವ 50 ಸೆಂಟ್ಸ್ ಜಾಗದಲ್ಲಿ 30 ಸೆಂಟ್ಸ್ ಈ ವಿದ್ಯುತ್ ಮಾರ್ಗಕ್ಕೆ ಹೋದರೆ ಕೃಷಿಯನ್ನು ನೆಚ್ಚಿಕೊಂಡು ಬದುಕುವುದಾದರೂ ಹೇಗೆ ಎಂಬುದು ರೈತರ ಆತಂಕ. ಈ ತಾಲ್ಲೂಕುಗಳಲ್ಲಿ ತೆಂಗು, ಕಂಗು, ಕರಿಮೆಣಸು ಬೆಳೆ ಜಾಸ್ತಿ' ಎಂದರು.
ಹೋರಾಟ ಸಮಿತಿ ಸಂಚಾಲಕ ಶ್ಯಾಮಪ್ರಸಾದ್, 'ಜಿಲ್ಲೆಯಲ್ಲಿ ಕೃಷಿ ಹಿಡುವಳಿಗಳೇ ಕಡಿಮೆಯಾಗುತ್ತಿವೆ. ಕೃಷಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಈ ಯೋಜನೆಯಿಂದ ಕೃಷಿಗೆ ಮತ್ತಷ್ಟು ಹೊಡೆತ ಬೀಳಲಿದೆ. 110 ಕೆ.ವಿ. ವಿದ್ಯುತ್ ಮಾರ್ಗದಡಿಯಲ್ಲೇ ಕೃಷಿ ಸಾಧ್ಯವಿಲ್ಲ. 400 ಕೆ.ವಿ. ವಿದ್ಯುತ್ ಮಾರ್ಗದ ಬಳಿ ಬೆಲೆ ಬೆಳೆಸಲು ಸಾಧ್ಯವೇ? ನಮಗೆ ಪರಿಹಾರ ಮುಖ್ಯವಲ್ಲ. ವಿದ್ಯುತ್ ಮಾರ್ಗವನ್ನು ಸಮುದ್ರದಲ್ಲಿ ಅಥವಾ ಹೆದ್ದಾರಿ ಪಕ್ಕದಲ್ಲಿ ಅಳವಡಿಸಿ ಎಂಬುದೇ ನಮ್ಮ ಒತ್ತಾಯ' ಎಂದರು.
'ಜಿಲ್ಲೆಯ 17 ಗ್ರಾಮಗಳ ಮೂಲಕ ಹಾದುಹೋಗುತ್ತದೆ. 500ಕ್ಕೂ ಹೆಚ್ಚು ಕುಟುಂಬಗಳ ಜಾಗ ಈ ಯೋಜನೆಗೆ ಬಳಕೆ ಆಗಲಿದೆ. ಬಂಟ್ವಾಳ ತಾಲ್ಲೂಕು ಒಂದರಲ್ಲೇ 120ಕ್ಕೂ ಹೆಚ್ಚು ಕೃಷಿ ಕುಟುಂಬಗಳು ಈ ಯೋಜನೆಯಿಂದ ಸಂತ್ರಸ್ತರಾಗಲಿದ್ದಾರೆ' ಎಂದರು.
'ರೈತರಿಗೆ ಮಾಹಿತಿ ನೀಡದೆಯೇ ಕಾಮಗಾರಿ ನಡೆಸುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಕೆಲ ರೈತರು ಅನಿವಾರ್ಯವಾಗಿ ಹೈಕೋರ್ಟ್ ಮೊರೆ ಹೋಗಿ ಈ ಯೋಜನೆಗೆ ತಡೆಯಾಜ್ಞೆ ತಂದಿದ್ದಾರೆ' ಎಂದರು.
ಸಮಿತಿ ಕಾರ್ಯದರ್ಶಿ ರೋಹಿತಾಶ್ವ, ರೈತ ಮುಖಂಡರಾದ ಚಿತ್ತರಂಜನ್, ಅಣ್ಣುಗೌಡ, ಸಂಜೀವ ಗೌಡ, ಪದ್ಮನಾಭ ಗೌಡ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್‌ನ್ ಸುಧೀರ್ ಕುಮಾರ್ ಶೆಟ್ಟಿ. ಆಲ್ವಿನ್ ಪ್ರಕಾಶ್ ಇದ್ದರು.