ನಾಗಪಟ್ಟಿಣಂ(PTI): ಶ್ರೀಲಂಕಾದ ಅಂತರ್ಯುದ್ಧದ ಕಾರಣದಿಂದಾಗಿ 40 ವರ್ಷಗಳ ಹಿಂದೆ ರದ್ದಾಗಿದ್ದ ಶ್ರೀಲಂಕಾ- ಭಾರತ ನಡುವಣ ಪ್ರಯಾಣಿಕ ದೋಣಿ ಸಂಚಾರ ಸೇವೆ ಶನಿವಾರ ಪುನರಾರಂಭಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದಲೇ ವರ್ಚುವಲ್ ಆಗಿ ಪ್ರಯಾಣಿಕ ದೋಣಿಗೆ ಚಾಲನೆ ನೀಡಿದರು.
ತಮಿಳುನಾಡಿನ ನಾಗಪಟ್ಟಿಣಂ ಮತ್ತು ಉತ್ತರ ಶ್ರೀಲಂಕಾದ ಜಾಫ್ನಾ ಬಳಿಯ ಕಂಕಸಂತುರೈ ನಡುವಣ ದೋಣಿ ಸೇವೆಯು ಎರಡು ದೇಶಗಳ ಪ್ರಾಚೀನ ಕಡಲ ಮಾರ್ಗವನ್ನು ಪುನರ್‌ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಸ್‌ಸಿಐ) ಈ ವೇಗದ ದೋಣಿಯನ್ನು ನಿರ್ವಹಿಸುತ್ತಿದೆ. 150 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ದೋಣಿಯು, ನಾಗಪಟ್ಟಿಣಂ ಮತ್ತು ಕಂಕಸಂತುರೈ ನಡುವಿನ ಸುಮಾರು 60 ನಾಟಿಕಲ್ ಮೈಲು (110 ಕಿಮೀ) ದೂರವನ್ನು ಸಮುದ್ರದ ಪರಿಸ್ಥಿತಿಗಳಿಗೆ ಅನುಗುಣವಾಗಿ ಸುಮಾರು ಮೂರೂವರೆ ಗಂಟೆಗಳಲ್ಲಿ ಕ್ರಮಿಸಲಿದೆ.
'ಚೆರಿಯಪಾನಿ' ಹೆಸರಿನ ದೋಣಿಯು ಮೊದಲ ಯಾನದಲ್ಲಿ ಶ್ರೀಲಂಕಾಕ್ಕೆ 50 ಪ್ರಯಾಣಿಕರೊಂದಿಗೆ ಪ್ರಯಾಣಿಸಿತು. ಸಂಜೆಯ ವೇಳೆಗೆ ಭಾರತಕ್ಕೆ ಮರಳಲಿದೆ. ಚೊಚ್ಚಲ ಯಾನದಲ್ಲಿದ್ದ ಪ್ರಯಾಣಿಕರು ಶ್ರೀಲಂಕಾಕ್ಕೆ ದೋಣಿಯಲ್ಲಿ ತೆರಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
-ಭಾರತದ ರಾಮೇಶ್ವರಂ- ಶ್ರೀಲಂಕಾದ ತಲೈಮನ್ನಾರ್ ನಡುವಿನ ಸಾಂಪ್ರದಾಯಿಕ ಮಾರ್ಗ ಸೇರಿದಂತೆ ಇತರ ಬಂದರುಗಳ ನಡುವೆ ದೋಣಿ ಸಂಚಾರ ಸೇವೆಗಳನ್ನು ಪ್ರಾರಂಭಿಸಲು ಎರಡೂ ದೇಶಗಳು ಕಾರ್ಯೋನ್ಮುಕವಾಗಿವೆಭಾರತದ ವಿಶಾಲ ಉದ್ದೇಶ :
- ಜೈಶಂಕರ್ ವಿದೇಶಾಂಗ ಸಚಿವ
1982ಕ್ಕೂ ಹಿಂದೆ ತಮಿಳುನಾಡಿನ ತೂತ್ತುಕುಡಿ ಚೆನ್ನೈ ಮತ್ತು ಕೊಲಂಬೊ ನಡುವೆ ಇಂಡೋ-ಸಿಲೋನ್ ಎಕ್ಸ್‌ಪ್ರೆಸ್ ದೋಣಿ ಸಂಚಾರ ಸೇವೆ ಇತ್ತು. ಪ್ರಾಚೀನವಾದ ಈ ಮಾರ್ಗವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಸದ್ಯ ಹೊಸ ದೋಣಿ ಸೇವೆ ಯೋಜನೆಯು ಒಳಗೊಂಡಿದೆ. ಜತೆಗೆ ಭಾರತದ ಈ ಪ್ರಯತ್ನವು ನೆರೆಹೊರೆಯವರೊಂದಿಗೆ ಮತ್ತು ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸಂಪರ್ಕವನ್ನು ಬಲಪಡಿಸುವ ವಿಶಾಲ ಉದ್ದೇಶವನ್ನು ಒಳಗೊಂಡಿದೆ. ದೋಣಿ ಸಂಚಾರ ಸೇವೆ ಪ್ರಾರಂಭಿಸುವ ಸಲುವಾಗಿ ನಾಗಪಟ್ಟಿಣಂ ಬಂದರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಭಾರತ ಸರ್ಕಾರವು ತಮಿಳುನಾಡಿಗೆ ನೆರವು ನೀಡುತ್ತಿದೆ. ಅಂತೆಯೇ ಶ್ರೀಲಂಕಾ ಸರ್ಕಾರವು ಕಂಕಸಂತುರೈ ಬಂದರಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿದೆ.