ಗಾಜಾ ಪಟ್ಟಿ: ಗಾಜಾ ನಗರದಲ್ಲಿರುವ ಆಸ್ಪತ್ರೆಯೊಂದರ ಮೇಲೆ ಮಂಗಳವಾರ ಇಸ್ರೇಲ್‌ನ ಸೇನೆ ವಾಯುದಾಳಿ ನಡೆಸಿದ್ದು, ಕನಿಷ್ಠ 500 ಮಂದಿ ಹತರಾಗಿದ್ದಾರೆ.
'ಗಾಜಾದ ಅಹ್ಲಿ ಅರಬ್ ಆಸ್ಪತ್ರೆ ಮೇಲೆ ಈ ದಾಳಿ ದಾಳಿ ನಡೆದಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳು ಸೇರಿದಂತೆ ಹಲವರು ಆಶ್ರಯ ಪಡೆದಿದ್ದರು' ಎಂದು ಹಮಾಸ್ ಪ್ರಾಬಲ್ಯವುಳ್ಳ ಪ್ಯಾಲೆಸ್ಟೀನ್ ಪ್ರಾಂತ್ಯದ ಆರೋಗ್ಯ ಸಚಿವಾಲಯವು ತಿಳಿಸಿದೆ.
ಗಾಜಾದ ಹಮಾಸ್ ಸರ್ಕಾರ ಈ ದಾಳಿಯನ್ನು 'ಯುದ್ಧ ಅಪರಾಧ' ಎಂದು ಹೇಳಿದೆ. 'ಕಟ್ಟಡದ ಅವಶೇಷಗಳ ನಡುವೆ ನೂರಾರು ಜನರು ಸಿಕ್ಕಿಬಿದ್ದಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಬಹುದು' ಎಂದು ಸಚಿವಾಲಯವು ತಿಳಿಸಿದೆ.
ದಾಳಿ ಹಿಂದೆಯೇ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಟಕಿಗಳ ಗಾಜುಗಳು ಸಿಡಿದವು. ವಾಯು ದಾಳಿಗೆ ಸಿಕ್ಕವರ ದೇಹದ ತುಣುಕುಗಳು ವಿವಿಧೆಡೆ ಚೆಲ್ಲಾಡಿದ್ದವು ಎಂದು ವರದಿ ತಿಳಿಸಿದೆ.
ಆಸ್ಪತ್ರೆಯಲ್ಲಿದ್ದ ರೋಗಿಗಳು, ಗಾಯಾಳುಗಳನ್ನು ದಾಳಿ ಹಿನ್ನೆಲೆಯಲ್ಲಿ ಬಲವಂತವಾಗಿ ಬೇರೆಡೆಗೆ ಸ್ಥಳಾಂತರಿಸಲಾಯಿತು.ನಗರದ ಇತರೆ ಆಸ್ಪತ್ರೆಗಳಲ್ಲಿಯೂ ಹಲವು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಸಂಘರ್ಷವು ಆರಂಭವಾದ ನಂತರ ಈವರೆಗೆ ಗಾಜಾಪಟ್ಟಿಯಲ್ಲಿ ಸುಮಾರು 3,000 ಜನರು ಹಾಗೂ ಇಸ್ರೇಲ್‌ನಲ್ಲಿ ಸುಮಾರು 1,400 ಜನರು ಸತ್ತಿದ್ದಾರೆ.
ಮೂರು ದಿನ ಶೋಕ: ಗಾಜಾದ ಆಸ್ಪತ್ರೆಯೊಂದರ ಮೇಲೆ ನಡೆದ ದಾಳಿಗೆ ನೂರಾರು ಜನರು ಬಲಿಯಾದ ಕೃತ್ಯದಿಂದಾಗಿ ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರು ಮೂರು ದಿನ ಶೋಕ ಘೋಷಿಸಿದ್ದಾರೆ.
ಇದು, ಹತ್ಯಾಕಾಂಡವಲ್ಲದೇ ಬೇರೇನೂ ಅಲ್ಲ. ಇಂತ ನರಮೇಧವನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯ ತಕ್ಷಣಕ್ಕೆ ಮಧ್ಯಪ್ರವೇಶಿಸಬೇಕು ಎಂದು ನಾವು ಕೋರುತ್ತೇವೆ. ದೀರ್ಘಕಾಲ ಮೌನವನ್ನು ಸಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇಸ್ರೇಲ್ ಸೇನೆ ಪ್ರತಿಕ್ರಿಯೆ: ಇಸ್ರೇಲ್‌ನ ಸೇನಾ ವಕ್ತಾರರಾದ ಡೇನಿಯಲ್ ಹಗರಿ ಅವರು, ಆಸ್ಪತ್ರೆಯ ದಾಳಿ ಮತ್ತು ಸಾವುಗಳನ್ನು ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
'ನಾವು ವಿವರ ಪಡೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ. ಇದು, ಇಸ್ರೇಲ್‌ನ ವಾಯುದಾಳಿ ಎಂದು ಹೇಳಲು ನನಗೆ ಮಾಹಿತಿ ಇಲ್ಲ' ಎಂದು ಅವರು ತಿಳಿಸಿದ್ದಾರೆ.