ತಿರುವನಂತಪುರಂ: ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಜೀವನೋಪಾಯಕ್ಕಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜಾರಿಗೆ ತಂದಿರುವ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಡಿ ಕುಟುಂಬಶ್ರೀ ಮೂಲಕ 51,046 ಫಲಾನುಭವಿಗಳು ರಾಜ್ಯಾದ್ಯಂತ ಸಾಲ ಪಡೆದಿದ್ದಾರೆ.
ರಾಜ್ಯದ ಎಲ್ಲ ಬ್ಯಾಂಕ್‍ಗಳ ಸಹಯೋಗದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಈ ಪೈಕಿ ಎಸ್‍ಬಿಐ 25,984 ಮತ್ತು ಕೆನರಾ ಬ್ಯಾಂಕ್ 10485 ಸಾಲದೊಂದಿಗೆ ಅಗ್ರಸ್ಥಾನದಲ್ಲಿದೆ. ಡಿಸೆಂಬರ್ 2023 ರೊಳಗೆ ಯೋಜನೆಯೊಂದಿಗೆ ಗರಿಷ್ಠ ಸಂಖ್ಯೆಯ ಬೀದಿ ವ್ಯಾಪಾರಿಗಳನ್ನು ಸಂಪರ್ಕಿಸುವುದು ಮತ್ತು ಅವರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವುದು ಗುರಿಯಾಗಿದೆ.
ಪಿಎಂ ಸ್ವಾನಿಧಿ ಎಂಬುದು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿರುವ ಬೀದಿ ವ್ಯಾಪಾರಿಗಳಿಗೆ ತಮ್ಮ ಉದ್ಯೋಗ ಮತ್ತು ಆದಾಯವನ್ನು ಪುನಃಸ್ಥಾಪಿಸಲು ಸಣ್ಣ ಸಾಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಪ್ರಾರಂಭಿಸಿದ ಯೋಜನೆಯಾಗಿದೆ. ಯೋಜನೆಯಡಿ ಫಲಾನುಭವಿಗಳಿಗೆ ಮೊದಲ, ಎರಡನೇ ಮತ್ತು ಮೂರನೇ ಹಂತದಲ್ಲಿ ಕ್ರಮವಾಗಿ 10,000, 20,000 ಮತ್ತು 50,000 ರೂ.ಲಭಿಸುತ್ತದೆ. ಪ್ರತಿ ಹಂತದಲ್ಲಿ ನೀಡಿದ ಸಾಲದ ಮರುಪಾವತಿ ಮುಗಿದ ನಂತರ ಮುಂದಿನ ಹಂತದ ಸಾಲ ಸಿಗುತ್ತದೆ. ಈ ರೀತಿಯಾಗಿ, ಪ್ರತಿ ಫಲಾನುಭವಿಯು ಗರಿಷ್ಠ 80,000 ರೂ.ಗಳ ಸಾಲವನ್ನು ಪಡೆಯಬಹುದು. ಪ್ರಸ್ತುತ 6531 ಫಲಾನುಭವಿಗಳಿಗೆ ಎರಡನೇ ಹಂತದ ಸಾಲ ಹಾಗೂ 1926 ಫಲಾನುಭವಿಗಳಿಗೆ ಮೂರನೇ ಹಂತದ ಸಾಲ ನೀಡಲಾಗಿದೆ. ಸಾಲದ ಮೇಲೆ ಶೇ.7ರಷ್ಟು ಬಡ್ಡಿ ಸಹಾಯಧನವೂ ಸಿಗುವುದರಿಂದ ಫಲಾನುಭವಿಗಳು ನಿರಾಳರಾಗಿದ್ದಾರೆ. ಅಲ್ಲದೆ, ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಪಾವತಿ ಮಾಡುವವರಿಗೆ ವಿಶೇಷ ಪ್ರೋತ್ಸಾಹವೂ ಸಿಗುತ್ತದೆ.
ಸಾಲ ಪಡೆಯಲು ನಗರಸಭೆಯಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸುವ ಪತ್ರ, ಮಾರಾಟ ಪ್ರಮಾಣ ಪತ್ರ, ಇವುಗಳಲ್ಲಿ ಯಾವುದಾದರೂ ಒಂದರೊಂದಿಗೆ ಆಧಾರ್ ಕಾರ್ಡ್ ನೀಡಬೇಕು. ಸಾಲ ಪಡೆಯಲು ಜಾಮೀನು ನೀಡುವ ಅಗತ್ಯವಿಲ್ಲದಿರುವುದು ಬೀದಿಬದಿ ವ್ಯಾಪಾರಿಗಳಿಗೂ ಸಮಾಧಾನ ತಂದಿದೆ.
ಪ್ರಸ್ತುತ, ರಾಜ್ಯದ ಎಲ್ಲಾ 93 ನಗರಸಭೆಗಳಲ್ಲಿ ಕುಟುಂಬಶ್ರೀ ಜಾರಿಗೆ ತಂದಿರುವ ಯೋಜನೆಯು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಬೀದಿ ಬದಿ ವ್ಯಾಪಾರಿಗಳಿಗೆ ಉತ್ತಮ ಉದ್ಯೋಗ ಮತ್ತು ಆದಾಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಪಿಎಂ ಸ್ವಾನಿಧಿಯ ಅನುಷ್ಠಾನವು ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಯೋಜನೆಯ ಒಂದು ಭಾಗವಾಗಿದೆ ಕುಟುಂಬಶ್ರೀಯು ಮುನ್ಸಿಪಲ್ ಕಾಪೆರ್Çರೇಷನ್‍ಗಳ ಸಹಯೋಗದೊಂದಿಗೆ ಜಾರಿಗೆ ತಂದಿದೆ.