ನವದೆಹಲಿ (PTI) ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ವೀಕರಿಸಿದ ಪ್ರಮಾಣ ವಚನವು ದೋಷಪೂರಿತವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಸುಪ್ರೀಂ ಕೋರ್ಟ್ ₹5 ಲಕ್ಷ ದಂಡ ವಿಧಿಸಿದೆ. 'ಇದು ಪ್ರಚಾರಕ್ಕಾಗಿ ನಡೆದ ಅವಿವೇಕದ ಪ್ರಯತ್ನ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
'ಪ್ರಮಾಣ ವಚನ ಸ್ವೀಕರಿಸುವಾಗ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ತಮ್ಮ ಹೆಸರಿಗೂ ಮೊದಲು 'ನಾನು' ಎಂದು ಉಲ್ಲೇಖಿಸಲಿಲ್ಲ. ಇದು ಸಂವಿಧಾನದ ಮೂರನೇ ಪರಿಚ್ಛೇದಕ್ಕೆ ವಿರುದ್ಧವಾಗಿದೆ. ಜತೆಗೆ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ -ನಗರ ಹವೇಲಿ ಮತ್ತು ಡಾಮನ್ -ಡಿಯುವಿನ ಪ್ರತಿನಿಧಿಗಳು ಮತ್ತು ಆಡಳಿತಾಧಿಕಾರಿಗಳನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ' ಎಂದು ಅಶೋಕ್ ಪಾಂಡೆ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ, 'ರಾಜ್ಯಪಾಲರಿಂದ ಪ್ರಮಾಣ ವಚನ ಬೋಧನೆಯಾಗಿದೆ. ಪ್ರಮಾಣ ವಚನ ಸ್ವೀಕಾರದ ನಂತರ ನ್ಯಾಯಮೂರ್ತಿ ಕರ್ತವ್ಯ ನಿರತರಾಗಿದ್ದಾರೆ. ಇಂಥ ಆಕ್ಷೇಪಣೆಗಳನ್ನು ಎತ್ತಲು ಅವಕಾಶವಿಲ್ಲ. ಇದು ಕೇವಲ ಪ್ರಚಾರ ತಂತ್ರವಷ್ಟೇ' ಎಂದು ಹೇಳಿತು.
'ಇಂತಹ ಹುಡುಗಾಟಿಕೆಯ ಪಿಐಎಲ್‌ಗಳು ನ್ಯಾಯಾಲಯದ ಸಮಯ ಹಾಳು ಮಾಡುತ್ತವೆ. ಆ ಮೂಲಕ ನ್ಯಾಯಾಲಯವು ಗಂಭೀರವಲ್ಲದ ವಿಷಯಗಳ ಕಡೆಗೆ ಗಮನ ಹರಿಸುವಂತೆ ಮಾಡುತ್ತವೆ. ಹೀಗಾಗಿ ಇಂಥ ಅರ್ಜಿಗಳಿಗೆ ದಂಡ ವಿಧಿಸುವ ಸಮಯ ಬಂದಿದೆ. ಪಿಐಎಲ್ ವಜಾಗೊಳಿಸುತ್ತಿರುವ ಈ ನ್ಯಾಯಪೀಠ ಅರ್ಜಿದಾರನಿಗೆ ₹5 ಲಕ್ಷ ದಂಡ ವಿಧಿಸುತ್ತಿದೆ. ನಾಲ್ಕು ವಾರಗಳಲ್ಲಿ ಈ ಹಣವನ್ನು ನ್ಯಾಯಾಲಯದ ರಿಜಿಸ್ಟರಿಯಲ್ಲಿ ಠೇವಣಿ ಮಾಡಬೇಕು' ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡಿದ್ದ ಪೀಠ ಸೂಚಿಸಿತು.
'ಸೂಚಿಸಲಾದ ಸಮಯದೊಳಗೆ ಹಣ ಠೇವಣಿ ಇಡದೇ ಹೋದರೆ, ಲಖನೌದ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಭೂ ಕಂದಾಯದ ಬಾಕಿಯ ರೂಪದಲ್ಲಿ ಹಣವನ್ನು ಸಂಗ್ರಹಿಸಲಾಗುವುದು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.