ತಿರುವನಂತಪುರಂ: ನವೆಂಬರ್ 5 ರಿಂದ ರಾಜ್ಯದಲ್ಲಿ ಎಲ್.ಪಿ.ಜಿ. ಸಿಲಿಂಡರ್ ಟ್ರಕ್ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುವುದು. ಈ ಪರಿಸ್ಥಿತಿಯಲ್ಲಿ ಅಡುಗೆ ಅನಿಲ ಪೂರೈಕೆ ಬಿಕ್ಕಟ್ಟಿಗೆ ಸಿಲುಕಲಿದೆ.
ಟಕ್ ಚಾಲಕರು ಕಳೆದ ಹನ್ನೊಂದು ತಿಂಗಳಿಂದ ವೇತನ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಲಾರಿ ಮಾಲೀಕರು ಸಕಾರಾತ್ಮಕ ನಿಲುವು ತಳೆಯಲಿಲ್ಲ. ಈ ನಡುವೆ ಸುಮಾರು ಇಪ್ಪತ್ತು ಬಾರಿ ಮಾಲೀಕರು, ಕಾರ್ಮಿಕರು, ಕಾರ್ಮಿಕ ಅಧಿಕಾರಿಗಳ ನಡುವೆ ಚರ್ಚೆ ನಡೆದಿದೆ. ಆದರೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಲಾರಿ ಚಾಲಕರು ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಕಾರ್ಮಿಕರು ಇಂದು ಮಧ್ಯಾಹ್ನದವರೆಗೆ ಸಾಂಕೇತಿಕ ಮುಷ್ಕರ ನಡೆಸಿದರು. ಮುಂದಿನ ತಿಂಗಳು 5ರಿಂದ ರಾಜ್ಯದ ಏಳು ಸ್ಥಾವರಗಳಲ್ಲಿ ಧರಣಿ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳ್ಳುವ ಆತಂಕವಿದೆ.