ಪತ್ತನಂತಿಟ್ಟ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲತಂದೆಗೆ ನ್ಯಾಯಾಲಯ 60 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
14 ವರ್ಷದ ಬಾಲಕಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 45 ವರ್ಷದ ಇರೂರ್ ಮೂಲದ ವ್ಯಕ್ತಿಗೆ ಪತ್ತನಂತಿಟ್ಟದ ಪ್ರಧಾನ ಪೋಕ್ಸೊ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 2 ಲಕ್ಷ ದಂಡ ಪಾವತಿಸಲೂ ಸೂಚಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಎರಡು ವರ್ಷಗಳ ಕಠಿಣ ಸಜೆ ಅನುಭವಿಸಬೇಕಾಗುತ್ತದೆ.
ಬಾಲಕಿಯ ಪೋಷಕರು ವಿಚ್ಛೇದನ ಪಡೆದಿದ್ದರು. ಬಳಿಕ ಬಾಲಕಿ ತಾಯಿ ಬೇರೊಬ್ಬರನ್ನು ವಿವಾಹವಾಗಿದ್ದರು. ಎರಡನೇ ವಿವಾಹದ ಬಳಿಕ ಬಾಲಕಿಯ ತಾಯಿಗೆ ಒಬ್ಬ ಮಗನೂ ಜನಿಸಿದ್ದ. 2014 ರಿಂದ 2018 ರ ಅವಧಿಯಲ್ಲಿ ಬಾಲಕಿಯನ್ನು ಬೆದರಿಸಿ ಬಲವಂತದ ಮೂಲಕ ಕಿರುಕುಳಕ್ಕೆ ನೀಡಲಾಗಿದೆ.
ಬಾಲಕಿಯ ತಾಯಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ವ್ಯಾಸಂಗಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್‍ನಲ್ಲಿ ತಂಗಿದ್ದ ಬಾಲಕಿ ಕಲಿಕಾ ನ್ಯೂನತೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆಕೆಗೆ ನೀಡಿದ ಕೌನ್ಸೆಲಿಂಗ್ ವೇಳೆ ಕಿರುಕುಳ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಆಗ ತಾಯಿಗೆ ಮಾಹಿತಿ ತಿಳಿದು ವಿದೇಶದಲ್ಲಿ ಕೆಲಸ ಬಿಟ್ಟಿದ್ದಾಳೆ. ಮಗಳಿಂದ ಮಾಹಿತಿ ಪಡೆದ ತಾಯಿ ಮಲತಂದೆಯ ವಿರುದ್ಧ ಪೋಲೀಸ್ ದೂರು ನೀಡಿದ್ದರು.