ದಿಸ್ಪುರ: 'ವಿದೇಶಿ' ಎಂದು ಹಣೆಪಟ್ಟಿ ಹಚ್ಚಿ ಬಂಧನ ಕೇಂದ್ರಕ್ಕೆ ಕಳುಹಿಸಿದ್ದ 6 ವರ್ಷಗಳ ಬಳಿಕ ಅಸ್ಸಾಂನ 50 ವರ್ಷದ ಮಹಿಳೆಯೋರ್ವರನ್ನು ಭಾರತೀಯ ಪ್ರಜೆ ಎಂದು ಮಾನ್ಯ ಮಾಡಲಾಗಿದೆ.
ಕಚಾರ್ ಜಿಲ್ಲೆಯ ಉಧಾರ್ಬಂದ್ ಪ್ರದೇಶದ ನಿವಾಸಿ ದುಲುಬಿ ಬೀಬಿಯನ್ನು ಸಿಲ್ಚಾರ್ನ ವಿದೇಶಿಗರ ಟ್ರಿಬ್ಯೂನಲ್-3ರ ಸದಸ್ಯರೋರ್ವರು 2017 ಮಾರ್ಚ್ 20ರಂದು 'ವಿದೇಶಿ' ಎಂದು ಘೋಷಿಸಿದ್ದರು.
1997ರಲ್ಲಿ ಉಧಾರ್ಬಂದ್ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆ ಸಂದರ್ಭ ಚುನಾವಣಾ ನೋಂದಣಿ ಅಧಿಕಾರಿ ಮತದಾರರ ಕರಡು ಪಟ್ಟಿಯಲ್ಲಿ ಅವರ ಹೆಸರನ್ನು ಡುಲುಬಿ ಬೀಬಿ ಎಂದು ಉಲ್ಲೇಖಿಸಲಾಗಿದೆ. ಆದರೆ, ಹಿಂದಿನ ಮತದಾರರ ಪಟ್ಟಿಯಲ್ಲಿ ಹಾಗೆ ಉಲ್ಲೇಖಿಸಿಲ್ಲ ಎಂದು ಪತ್ತೆ ಮಾಡಿದ್ದರು.
ಅನಂತರ ಬೀಬಿ 2015ರಲ್ಲಿ ವಿದೇಶಿಗರ ಟ್ರಿಬ್ಯೂನಲ್ನಿಂದ ನೋಟಿಸ್ ಸ್ವೀಕರಿಸಿದ್ದರು. 2017ರಲ್ಲಿ ವಿಚಾರಣೆ ಸಂದರ್ಭ ವಿವಿಧ ಮತದಾರರ ಪಟ್ಟಿಗಳಲ್ಲಿ ಆಕೆಯ ಹೆಸರು ದುಲುಬಿ ಬೀಬಿ, ದೋಲೋಬ್ಜಾನ್ ಬೇಗಮ್ ಹಾಗೂ ದುಲುಬ್ಜಾನ್ ಬೀಬಿ ಎಂದು ಉಲ್ಲೇಖಿಸಿರುವುದನ್ನು ನ್ಯಾಯಾಲಯ ಕಂಡುಕೊಂಡಿತ್ತು. ಈ ಪಟ್ಟಿಯಲ್ಲಿರುವ ಅವರ ತಂದೆ ಹಾಗೂ ಅಜ್ಜನ ಹೆಸರಿನ ನಡುವೆ ಹೊಂದಿಕೆಯಾಗಿರಲಿಲ್ಲ. ಅಲ್ಲದೆ, ತನ್ನ ಹೆತ್ತವರ ಹೆಸರಿನ ನಡುವಿನ ಸಂಬಂಧವನ್ನು ಸ್ಥಾಪಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಟ್ರಿಬ್ಯೂನಲ್ನ ಸದಸ್ಯ ಬಿ.ಕೆ. ತಾಲೂಕ್ದಾರ್ ಅವರು ಬೀಬಿ 'ವಿದೇಶಿ'. ಆಕೆ 1971 ಮಾರ್ಚ್ 25ರ ನಂತರ ಭಾರತಕ್ಕೆ ವಲಸೆ ಬಂದಿದ್ದಾರೆ ಎಂದು ಪ್ರತಿಪಾದಿಸಿದ್ದರು. ಅವರನ್ನು ಬಂಧಿಸುವಂತೆ ಹಾಗೂ ಬಾಂಗ್ಲಾದೇಶಕ್ಕೆ ಕಳುಹಿಸುವ ವರೆಗೆ ಬಂಧನ ಕೇಂದ್ರದಲ್ಲಿ ಇರಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಬೀಬಿಯನ್ನು 2018 ಎಪ್ರಿಲ್ 18ರಂದು ಬಂಧಿಸಲಾಗಿತ್ತು. ಅನಂತರ ಸಿಲ್ಚಾರ್ನ ಬಂಧನ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. 2020 ಎಪ್ರಿಲ್ 27ರಂದು ಬಂಧನ ಕೇಂದ್ರದಿಂದ ಬಿಡುಗಡೆ ಮಾಡಲಾಗಿತ್ತು.
ಅನಂತರ ಬೀಬಿ ಅವರು 1965ರಷ್ಟು ಹಳೆಯ ಮತದಾರರ ಪಟ್ಟಿಯೊಂದಿಗೆ ಗುವಾಹಟಿ ಉಚ್ಚ ನ್ಯಾಯಾಲಯ ಸಂಪರ್ಕಿಸಿದ್ದರು. ಈ ಪಟ್ಟಿಯಲ್ಲಿ ಅವರ ಅಜ್ಜನ ಹೆಸರು ಮಾಜ್ಮಿಲ್ ಅಲಿ ಎಂದು ಹೇಳಲಾಗಿತ್ತು. 1985ರ ಮತದಾರರ ಪಟ್ಟಿಯಲ್ಲಿ ಅವರ ತಂದೆಯ ಹೆಸರು ಸಿರೈ ಮಿಯಾ ಲಷ್ಕರ್ ಎಂದು ಹಾಗೂ ಅವರು ಮಾಜ್ಮಿಲ್ ಅಲಿ ಲಷ್ಕರ್ನ ಪುತ್ರನೆಂದು ಉಲ್ಲೇಖಿಸಲಾಗಿತ್ತು. 1993ರ ಮತದಾರರ ಪಟ್ಟಿಯಲ್ಲಿ ಅವರ ತಂದೆಯನ್ನು ಸಿರೈ ಮಿಯಾ ಎಂದು ಹೇಳಲಾಗಿತ್ತು. ಅವರು ಮಾಜ್ಮಿಲ್ ಅಲಿ ಅವರ ಪುತ್ರನೆಂದು ಉಲ್ಲೇಖಿಸಲಾಗಿದ್ತು. ಅವರನ್ನು ಸಿರೈಯ ಮಿಯಾ ಅವರ ಪುತ್ರಿಯಾದ ದೋಲೋಬ್ಜಾನ್ ಬೇಗಮ್ ಎಂದು ಉಲ್ಲೇಖಿಸಲಾಗಿತ್ತು.