ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದಾಳಿ ಮುಂದುವರೆದಿದ್ದು ದೇಶದ 6 ರಾಜ್ಯಗಳಲ್ಲಿ ಸಂಘಟನೆಗೆ ಸೇರಿದ ತಾಣಗಳ ಮೇಲೆ ದಾಳಿ ನಡೆಸಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ಭೇಟಿ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲು ಪಿಎಫ್‌ಐ ಸಂಚು ರೂಪಿಸಿತ್ತು ಎಂದು ಆರೋಪಿಸಿ ಪಾಟ್ನಾದ ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಕೈಗೆತ್ತಿಕೊಂಡ ತನಿಖಾಸಂಸ್ಥೆ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಶೋಧ ಕಾರ್ಯ ನಡೆಸಿದೆ.
ರಾಜಸ್ಥಾನದ ಟೋಂಕ್ ಜಿಲ್ಲೆ, ದೆಹಲಿ, ತಮಿಳುನಾಡಿನ ಮಧುರೈ ಸೇರಿದಂತೆ ಆರು ರಾಜ್ಯಗಳಲ್ಲಿನ ಪಿಎಫ್ಐ ಸಂಘಟನೆಗೆ ಸೇರಿದ ವ್ಯಕ್ತಿಗಳ ಮನೆ-ಕಟ್ಟಡಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ. ಮಹಾರಾಷ್ಟ್ರದ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ಅಬ್ದುಲ್ ವಾಹಿದ್ ಶೇಖ್ ಅವರ ಮನೆಯಲ್ಲಿ ಎನ್‌ಐಎ ತಂಡ ಶೋಧ ನಡೆಸಿದೆ. ರಾಜಸ್ಥಾನದ ಟೋಂಕ್, ಕೋಟಾ ಮತ್ತು ಗಂಗಾಪುರ ಮತ್ತು ರಾಷ್ಟ್ರ ರಾಜಧಾನಿಯ ಹೌಜ್ ಕಾಜಿ, ಬಲ್ಲಿಮಾರನ್‌ನಲ್ಲಿಯೂ ದಾಳಿ ನಡೆಸಲಾಯಿತು.
ಪ್ರಧಾನಿ ಭೇಟಿಯ ವೇಳೆ ಗಲಭೆ ಸೃಷ್ಟಿಸಲು ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ವಿರುದ್ಧ ಜುಲೈ 2022 ರಲ್ಲಿ ಪಾಟ್ನಾದ ಫುಲ್ವಾರಿ ಷರೀಫ್ ಪೊಲೀಸ್ ಠಾಣೆ ದಾಖಲಿಸಿದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ. ಶೇಖ್ 2006 ರ ರೈಲ್ವೆ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದರು ಆದರೆ ವಿಚಾರಣಾ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು.ಕಾನೂನು ಬಾಹಿರ ಚಟುವಟಿಕೆಗಳ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಆ ವೇಳೆ ಸಂಘಟನೆಯ ಹಲವು ಪ್ರಮುಖರನ್ನು ಬಂಧಿಸಲಾಗಿತ್ತು.