ಮುಂಬೈ: ಆರು ದಶಕಗಳಿಂದ ವಾಣಿಜ್ಯ ನಗರಿ ಮುಂಬೈ ಜನರ ಜೀವನಾಡಿಯಾಗಿದ್ದ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಗಳು ಇದೀಗ ಇತಿಹಾಸ ಪುಟವನ್ನು ಸೇರಲಿವೆ. ಈ ಟ್ಯಾಕ್ಸಿಗಳು ಮುಂಬೈನಲ್ಲಿ ಸಾರ್ವಜನಿಕವಾಗಿ 'ಕಾಲಿ ಪೀಲಿ' ಎಂದೇ ಮನೆ ಮಾತಾಗಿದ್ದವು. ನಗರದ ಪ್ರತಿಯೊಂದು ಅಂಶಗಳ ಜತೆಯಲ್ಲೂ ಪ್ರೀಮಿಯರ್ ಪದ್ಮಿನಿ ಬೆಸೆದುಕೊಂಡಿತ್ತು.
ಡಬ್ಬಲ್ ಡೆಕ್ಕರ್ ಡೀಸೆಲ್ ಬಸ್ಗಳ ಕಾರ್ಯಚರಣೆ ಅಂತ್ಯಗೊಂಡ ಬೆನ್ನಲ್ಲೇ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿ ಸೇವೆ ಸಹ ಕೊನೆಗೊಂಡಿದೆ. ಹೊಸ ಮಾದರಿಗಳು ಮತ್ತು ಅಪ್ಲಿಕೇಶನ್ ಆಧಾರಿತ ಕ್ಯಾಬ್ ಸೇವೆಗಳಿಗೆ ದಾರಿ ಮಾಡಿಕೊಡುವ ಮೂಲಕ, ಈ ಕಪ್ಪು-ಹಳದಿ ಬಣ್ಣದ ಟ್ಯಾಕ್ಸಿಗಳು ಈಗ ಮುಂಬೈನ ಬೀದಿಗಳಿಂದ ಮರೆಯಾಗಲಿವೆ. 2003ರ ಅ. 29ರಂದು ಈ ಟ್ಯಾಕ್ಸಿಗಳ ಕೊನೆಯ ನೋಂದಣಿಯಾಗಿತ್ತು ಮತ್ತು 20 ಕಾಲಮಿತಿಯನ್ನು ನೀಡಲಾಗಿತ್ತು. ಇದೀಗ ಆ ಕಾಲಮಿತಿ ಮುಕ್ತಾಯಗೊಂಡಿದ್ದು, ಟ್ಯಾಕ್ಸಿ ಸಂಚಾರಕ್ಕೆ ಇಂದು ಕೊನೆಯ ದಿನವಾಗಿದೆ. ನಾಳೆಯಿಂದ ಪ್ರೀಮಿಯರ್ ಪದ್ಮಿನಿ ಇತಿಹಾಸ ಪುಟ ಸೇರಲಿದೆ.
ಇದು (ಪ್ರೀಮಿಯರ್ ಪದ್ಮಿನಿ) ಮುಂಬೈನ ಹೆಮ್ಮೆ ಮತ್ತು ನನ್ನ ಜೀವನವಾಗಿತ್ತು ಎಂದು ಪ್ರಭಾದೇವಿ ನಿವಾಸಿ ಅಬ್ದುಲ್ ಕರೀಮ್ ಕರ್ಸೆಕರ್ ಅವರು ಹೇಳಿದರು. ಇವರು MH-01-JA-2556 ಸಂಖ್ಯೆಯ ಮುಂಬೈನ ಕೊನೆಯ ನೋಂದಾಯಿತ ಪ್ರೀಮಿಯರ್ ಪದ್ಮಿನಿ ಟ್ಯಾಕ್ಸಿಯನ್ನು ಹೊಂದಿದ್ದಾರೆ. ಕೆಲವೇ ವಾರಗಳಲ್ಲಿ ಎರಡು ಸಾಂಪ್ರದಾಯಿಕ ಸಾರ್ವಜನಿಕ ಸಾರಿಗೆದಾರರ ನಿವೃತ್ತಿಯು ಮುಂಬೈನ ಸಾರಿಗೆ ಉತ್ಸಾಹಿಗಳ ಮೇಲೆ ಭಾರೀ ನಿರಾಸೆಯನ್ನು ಉಂಟುಮಾಡಿದೆ.
ಈ ಟ್ಯಾಕ್ಸಿಗಳು ಮುಂಬೈನಲ್ಲಿ ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಕೆಲವರು ಕನಿಷ್ಠ ಒಂದು 'ಪ್ರೀಮಿಯರ್ ಪದ್ಮಿನಿ'ಯನ್ನು ರಸ್ತೆಯ ಮೇಲೆ ಅಥವಾ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಬೇಕೆಂದು ಕರೆ ನೀಡಿದ್ದಾರೆ ಮತ್ತು ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ. ನಗರದಲ್ಲಿ ಹಲವಾರು ಹಳೆಯ ಸ್ಮಾರಕಗಳನ್ನು ಸಂರಕ್ಷಿಸುತ್ತಿದ್ದೇವೆ. ಅವುಗಳಂತೆಯೇ, ಜೀವಂತ ಸ್ಮಾರಕಗಳಾಗಿರುವ ಈ ಐಕಾನಿಕ್ ಕ್ಯಾಬ್‌ಗಳನ್ನು ಸಹ ನಾವು ಸಂರಕ್ಷಿಸಬೇಕಾಗಿದೆ ಕ್ಲಾಸಿಕ್ ಕಾರುಗಳ ಉತ್ಸಾಹಿ ಡೇನಿಯಲ್ ಸಿಕ್ವೇರಾ ಎಂಬುವರು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ನಗರದ ಅತಿದೊಡ್ಡ ಟ್ಯಾಕ್ಸಿ ಡ್ರೈವರ್ ಯೂನಿಯನ್‌ಗಳಲ್ಲಿ ಒಂದಾದ ಮುಂಬೈ ಟ್ಯಾಕ್ಸಿಮೆನ್ಸ್ ಯೂನಿಯನ್ ಕನಿಷ್ಠ ಒಂದು ಕಾಲಿ-ಪೀಲಿಯನ್ನಾದರೂ ಸಂರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು, ಆದರೆ ಈವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಜನರು ಕೂಡ ಟ್ಯಾಕ್ಸಿಗಳನ್ನು ಸಂರಕ್ಷಣೆ ಮಾಡುವಂತೆ ಧ್ವನಿಯೇರಿಸಿದ್ದು, ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಿದೆ.