ರಫಾ : ಇಸ್ರೇಲ್ ನಡೆಸುತ್ತಿರುವ ವಾಯುದಾಳಿಯು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಗಾಜಾ ಪಟ್ಟಿಯಲ್ಲಿ 700ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇವರಲ್ಲಿ 305 ಮಂದಿ ಮಕ್ಕಳು. ಬಾಂಬ್ ದಾಳಿಯಿಂದ ಆಗಿರುವ ಹಾನಿ ಹಾಗೂ ಇಂಧನ ಕೊರತೆಯ ಕಾರಣದಿಂದಾಗಿ ಗಾಜಾ ಪಟ್ಟಿಯಲ್ಲಿ ಆರೋಗ್ಯಸೇವೆಗಳು ಹಲವೆಡೆ ಸ್ಥಗಿತಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಸ್ರೇಲ್‌ನ ಭೂಸೇನೆಯು ಮಿಲಿಟರಿ ಟ್ಯಾಂಕ್ ಹಾಗೂ ಆರ್ಟಿಲ್ಲರಿಗಳೊಂದಿಗೆ ಗಾಜಾ ಮೇಲೆ ಭೂದಾಳಿ ಆರಂಭಿಸಿದಲ್ಲಿ ಸಾವಿನ ಸಂಖ್ಯೆಯು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಒಂದು ದಿನದ ಅವಧಿಯಲ್ಲಿ 400 ವಾಯುದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ. ಈ ದಾಳಿಗಳಲ್ಲಿ ಹಮಾಸ್ ಕಮಾಂಡರ್‌ಗಳು ಸತ್ತಿದ್ದಾರೆ ಎಂದು ಹೇಳಿದೆ. ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಲು ಸಜ್ಜಾಗುತ್ತಿದ್ದ ಕೆಲವು ಬಂಡುಕೋರರು ಕೂಡ ಸತ್ತಿದ್ದಾರೆ ಎಂದು ತಿಳಿಸಿದೆ.
ವಾಯುದಾಳಿ ಸಂದರ್ಭದಲ್ಲಿ ವಸತಿ ಕಟ್ಟಡಗಳಿಗೂ ಹಾನಿಯಾಗಿದೆ. ಇಸ್ರೇಲ್ ಮಿಲಿಟರಿಯು ಗಾಜಾ ಪಟ್ಟಿಯ ದಕ್ಷಿಣ ಭಾಗದ ಮೇಲೆಯೂ ದಾಳಿ ನಡೆಸಿದೆ. ಖಾನ್ ಯೂನಿಸ್ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡವೊಂದರ ಮೇಲೆ ದಾಳಿಯಾಗಿದ್ದು 32 ಮಂದಿ ಮೃತಪಟ್ಟಿದ್ದಾರೆ.
ಗಾಜಾ ಪಟ್ಟಿಯಲ್ಲಿ ಆರೋಗ್ಯಸೇವೆಗಳನ್ನು ಒದಗಿಸುವ ಘಟಕಗಳು ಸ್ಥಗಿತಗೊಳ್ಳುತ್ತಿವೆ. 72 ಕೇಂದ್ರಗಳ ಪೈಕಿ 46 ಆರೋಗ್ಯ ಸೇವಾ ಕೇಂದ್ರಗಳು ಗಾಜಾ ಪಟ್ಟಿಯಲ್ಲಿ ಸ್ಥಗಿತಗೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇವುಗಳಲ್ಲಿ 12 ಆಸ್ಪತ್ರೆಗಳೂ ಸೇರಿವೆ.
ಇಸ್ರೇಲ್ ವಾಯುದಾಳಿಯಿಂದಾಗಿ ಆಗಿರುವ ಹಾನಿ ಹಾಗೂ ದಿಗ್ಬಂಧನದಿಂದಾಗಿ ಆಗಿರುವ ಇಂಧನ ಕೊರತೆಯು ಈ ಘಟಕಗಳ ಸ್ಥಗಿತಕ್ಕೆ ಕಾರಣ ಎಂದು ಪ್ಯಾಲೆಸ್ಟೀನ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಗಾಜಾ ಪಟ್ಟಿಯಲ್ಲಿ ಇರುವ ಪ್ಯಾಲೆಸ್ಟೀನ್ ನಾಗರಿಕರಿಗೆ ಆಹಾರ, ನೀರು, ಔಷಧ ಪೂರೈಕೆಗೆ ಇಸ್ರೇಲ್ ಅವಕಾಶ ಮಾಡಿಕೊಟ್ಟಿದೆ. ಆದರೆ ಇಂಧನ ಪೂರೈಕೆಗೆ ತಡೆ ಮುಂದುವರಿಸಿದೆ.
ಬಾಂಬ್ ದಾಳಿಗೆ ಸಿಲುಕಿ ವಿಶ್ವಸಂಸ್ಥೆಯ ಆರು ಜನ ಸಿಬ್ಬಂದಿ ಮೃತಪಟ್ಟಿದ್ದಾರೆ. ಯುದ್ಧ ಶುರುವಾದ ನಂತರದಲ್ಲಿ ವಿಶ್ವಸಂಸ್ಥೆಯ 35 ಸಿಬ್ಬಂದಿ ಬಲಿಯಾಗಿದ್ದಾರೆ.