ನವದೆಹಲಿ: ಯುವ ಉದ್ಯೋಗಿಗಳು ವಾರಕ್ಕೆ ಕನಿಷ್ಠ ಎಂದರು 70 ಘಂಟೆಗ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದ್ದು, ಇದೀಗ ಭಾರತ್ಪೇ ಸಹಸ ಸಂಸ್ಥಾಪಕ, ವಿವಾದಾತ್ಮಕ ಹೇಳಿಕೆಗಳಿಂದಲೇ ಕುಖ್ಯಾತಿ ಪಡೆದಿರುವ ಅಶ್ನೀರ್ ಗ್ರೋವರ್ ಪ್ರತಿಕ್ರಿಯಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಇನ್ನೊಬ್ಬರ ಫಲಿತಾಂಶವನ್ನು ಹೊಗಳುವ ಬದಲು ಘಂಟೆಗಳ ಆಧಾರದ ಮೇಲೆ ಅಳೆಯುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಅಲ್ಲದೇ, ಯುವಕರ ಮೈಗಳ್ಳತನವೇ ಭಾರತದ ಬೆಳವಣಿಗೆಗೆ ತಡೆಯಾಗಿದೆ ಎಂದು ಜನರು ಭಾವಿಸಿದ್ದಾರೆ.
ಕ್ರಿಕೆಟ್, ಧರ್ಮ, ಜಾತಿ, ಭಾಷೆ ಇವೆಲ್ಲಕ್ಕಿಂತ ಈ ರೀತಿಯ ಕೆರಳುವಿಕೆಯೇ ನಮ್ಮನ್ನೆಲ್ಲ ಒಗ್ಗೂಡಿಸುತ್ತದೆ ಎನ್ನುವುದು ಮೋಜಿನ ಸಂಗತಿಯಲ್ಲವೇ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಮೂಲಕ ಹೊಸ ಚರ್ಚೆ ಒಂದನ್ನು ಹುಟ್ಟು ಹಾಕಿದ್ದಾರೆ.
ಕೇವಲ 9-5 ಕೆಲಸ ಮಾಡಿ ಯಾರೂ ಹಣೆಬರೆಹವನ್ನು ಬದಲಾಯಿಸಿಕೊಂಡಿಲ್ಲ. ಈಗಿನ ಯುವಕರು ಸೋಂಬೇರಿಗಳು. ವಾರಕ್ಕೆ 70 ಗಂಟೆಗಳೆಂದರೆ ನಿಜಕ್ಕೂ ದೊಡ್ಡವಿಷಯವಲ್ಲ. ದಿನಕ್ಕೆ 14 ಗಂಟೆಗಳ ಕೆಲಸವಷ್ಟೆ. ನಮ್ಮ ಪ್ರಧಾನಿ ಮೋದಿಯವರನ್ನು ಇವರು ನೋಡಿ ಕಲಿತರೆ ಭಾರತವು ಶೀಘ್ರವೇ 70 ಟ್ರಿಲಿಯನ್ ಜಿಡಿಪಿಯ ವಿಶ್ವದ ಪ್ರಬಲ ದೇಶವಾಗುವುದು ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಸಂಸ್ಥೆಯ ಮುಖ್ಯಸ್ಥರು ಹಾಗೂ ಕೆಲಸಗಾರರ ನಡುವಿನ ಆಲೋಚನೆಗಳಲ್ಲಿ ತುಂಬಾ ವ್ಯತ್ಯಾಸಗಳಿರುತ್ತವೆ. ಈ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ತರಹದ ಆದಾಯಗಳನ್ನು ಹೊಂದಿದ್ದು, ಮಾಲೀಕ ದಿನದ 24 ಘಂಟೆ ದುಡಿಯಬೇಕು, ಕೆಲಸಗಾರ ದಿನದ 8 ಘಂಟೆ ದುಡಿದರೆ ಸಾಕು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ನಾರಾಯಣಮೂರ್ತಿ ಯಾವ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಏನು ಹೇಳಿದ್ದರೋ, ಆ ಹೇಳಿಕೆಗೆ ರೆಕ್ಕೆಪುಕ್ಕಗಳು ಮೂಡಿ ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಒಂದನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.