ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ 91ನೇ ವಾಯುಪಡೆ ದಿನಾಚರಣೆಯಲ್ಲಿ ಏರ್ ಚೀಫ್ ಮಾರ್ಷಲ್ ಆರ್.ವಿ ಚೌಧರಿ ಭಾರತೀಯ ವಾಯುಪಡೆ(ಐಎಎಫ್)ಯ ಹೊಸ ಧ್ವಜವನ್ನು ಅನಾವರಣಗೊಳಿಸಿದರು.
'ಐಎಎಫ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ. ನಾವು ನೋಡಲು ಬಯಸುವ ಬದಲಾವಣೆಗಾಗಿ ಎಲ್ಲರೂ ಶ್ರಮಿಸೋಣ' ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ವಾಯುಪಡೆ ದಿನಾವರಣೆಯ ಭಾಷಣದಲ್ಲಿ ಹೇಳಿದರು.
ನಮ್ಮ ವಾಯುಪಡೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾವು ಒಟ್ಟಾಗಿ ಕೆಲಸ ಮಾಡೋಣ. ಎಲ್ಲದರಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ನಮ್ಮ ಬದ್ಧತೆ ಮತ್ತು ಸಾಮೂಹಿಕ ಸಾಮರ್ಥ್ಯವನ್ನು ಬಳಸೋಣ ಎಂದು ಅವರು ಕರೆ ನೀಡಿದರು.
ಭಾರತೀಯ ವಾಯುಪಡೆಯನ್ನು ಅಧಿಕೃತವಾಗಿ ಅ.8, 1932ರಂದು ಸ್ಥಾಪಿಸಲಾಯಿತು. 2ನೇ ಮಹಾಯುದ್ದದ ಸಮಯದಲ್ಲಿ ಅದರ ವೃತ್ತಿಪರ ದಕ್ಷತೆ ಮತ್ತು ಸಾಧನೆಗಳ ದೃಷ್ಟಿಯಿಂದ ಈ ಪಡೆಗೆ ಮಾರ್ಚ್ 1945ರಲ್ಲಿ 'ರಾಯಲ್' ಎಂಬ ಪೂರ್ವಪ್ರತ್ಯಯವನ್ನು ನೀಡಲಾಯಿತು. ಆದ್ದರಿಂದ ಇದನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ (RIAF) ಎಂದು ಕರೆಯಲಾಯಿತು.
1950ರಲ್ಲಿ ಐಎಎಫ್ ತನ್ನ ರಾಯಲ್ ಪೂರ್ವಪ್ರತ್ಯಯವನ್ನು ಕೈಬಿಟ್ಟಿತು. ಭಾರತ ಗಣರಾಜ್ಯವಾಗುತ್ತಿದ್ದಂತೆ ಧ್ವಜವನ್ನು ತಿದ್ದುಪಡಿ ಮಾಡಿತು. ಆರ್‌ಐಎಎಫ್ ಚಿಹ್ನೆಯು ಮೇಲಿನ ಎಡ ಭಾಗದಲ್ಲಿ ಯೂನಿಯನ್ ಜ್ಯಾಕ್ ಮತ್ತು ಫ್ಲೈ ಸೈಡ್‌ನಲ್ಲಿ ಆರ್‌ಐಎಎಫ್ ಕೆಂಪು, ಬಿಳಿ ಮತ್ತು ನೀಲಿ ಬಣ್ಣವನ್ನು ಒಳಗೊಂಡಿತ್ತು.
ಸ್ವಾತಂತ್ರ್ಯದ ನಂತರ, ಯೂನಿಯನ್ ಜ್ಯಾಕ್ ಅನ್ನು ಭಾರತೀಯ ತ್ರಿವರ್ಣದೊಂದಿಗೆ ಮತ್ತು ಆರ್‌ಎಎಫ್ ಬಣ್ಣಗಳನ್ನು ಕೆಳಗಿನ ಬಲ ಕ್ಯಾಂಟನ್‌ನಲ್ಲಿ ಐಎಎಫ್ ತ್ರಿವರ್ಣ ಬಣ್ಣಗಳೊಂದಿಗೆ ಬದಲಾಯಿಸುವ ಮೂಲಕ ಧ್ವಜವನ್ನು ರಚಿಸಲಾಯಿತು.
ಭಾರತೀಯ ವಾಯುಪಡೆಯ ಮೌಲ್ಯಗಳನ್ನು ಪ್ರತಿಬಿಂಬಿಸಲು ಹೊಸ ಎಲ್‌ಎಎಫ್ ಧ್ವಜವನ್ನು ಈಗ ರಚಿಸಲಾಗಿದೆ. ಈ ಹೊಸ ಧ್ವಜದ ಮೇಲಿನ ಬಲ ಮೂಲೆಯಲ್ಲಿ, ಫ್ಲೈ ಸೈಡ್ ಹಾಗೂ ಕೊನೆಯಲ್ಲಿ ಏರ್ ಫೋರ್ಸ್ ಕ್ರೆಸ್ಟ್ ಅನ್ನು ಪ್ರತಿನಿಧಿಸುತ್ತದೆ ಎಂದು ಐಎಎಫ್ ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಐಎಎಫ್ ಧ್ವಜವು ರಾಷ್ಟ್ರೀಯ ಚಿಹ್ನೆಯನ್ನು ಹೊಂದಿದೆ. ಅದರ ಕೆಳಭಾಗದಲ್ಲಿ ದೇವನಾಗರಿಯಲ್ಲಿ 'ಸತ್ಯಮೇವ ಜಯತೆ' ಎಂಬ ಪದದೊಂದಿಗೆ ಅಶೋಕ ಚಕ್ರವಿದೆ. ಅಶೋಕ ಸ್ತಂಭದ ಕೆಳಗೆ ಹಿಮಾಲಯದ ಹದ್ದು ಅದರ ರೆಕ್ಕೆಗಳನ್ನು ಬಿಚ್ಚಿದೆ. ಇದು ಐಎಎಫ್‌ನ ಹೋರಾಟದ ಗುಣಗಳನ್ನು ಸೂಚಿಸುತ್ತದೆ. ಭಾರತೀಯ ವಾಯು ಸೇನೆ ಎಂಬ ಪದದೊಂದಿಗೆ ತಿಳಿ ನೀಲಿ ಬಣ್ಣದ ಉಂಗುರವು ಹಿಮಾಲಯದ ಹದ್ದನ್ನು ಸುತ್ತುವರೆದಿದೆ.
ಐಎಎಫ್‌ನ ಧ್ಯೇಯವಾಕ್ಯ 'ವೈಭವದೊಂದಿಗೆ ಆಕಾಶವನ್ನು ಸ್ಪರ್ಶಿಸಿ' ಎಂದು ದೇವನಾಗರಿಯಲ್ಲಿ ಹಿಮಾಲಯದ ಹದ್ದಿನ ಕೆಳಗೆ ಕೆತ್ತಲಾಗಿದೆ. ಈ ಧ್ಯೇಯವಾಕ್ಯವನ್ನು ಭಗವದ್ಗೀತೆಯ 24ನೇ ಹಾಗೂ 11ನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ.