ಜೈಪುರ: 'ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ರಾಜಸ್ಥಾನದ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ₹ 7 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಚಿತ್ತೋರ್‌ಘಡ್‌ದಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
'ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರಾಜ್ಯದ ಜನರ ಜೀವನ ಇನ್ನಷ್ಟು ಸರಳಗೊಳಿಸಲಾಗಿದೆ. ಜತೆಗೆ ಉದ್ಯೋಗಾವಕಾಶವನ್ನೂ ಹೆಚ್ಚಿಸಲಾಗಿದೆ. ರಾಜಸ್ಥಾನದಲ್ಲಿ ಎಕ್ಸ್‌ಪ್ರೆಸ್‌ವೇ, ಹೆದ್ದಾರಿ ಹಾಗೂ ರೈಲ್ವೆಗಳ ಆಧುನೀಕರಣದತ್ತ ಕೇಂದ್ರ ಸರ್ಕಾರ ತನ್ನ ಗಮನವನ್ನು ಕೇಂದ್ರೀಕರಿಸಿದೆ' ಎಂದಿದ್ದಾರೆ.
'ರಾಜಸ್ಥಾನಕ್ಕೆ ಇತಿಹಾಸದ ಪರಂಪರೆ ಇದೆ, ವರ್ತಮಾನದ ಸಾಮರ್ಥ್ಯವಿದೆ ಹಾಗೂ ಭವಿಷ್ಯದ ಸಾಧ್ಯತೆ ಇದೆ. ಹೀಗಾಗಿ ರಾಜಸ್ಥಾನ ತ್ರಿಶಕ್ತಿ ಕೇಂದ್ರವಾಗಿದ್ದು, ಇದರ ಮೂಲಕ ದೇಶದ ಸಾಮರ್ಥ್ಯ ಇನ್ನಷ್ಟು ಉಜ್ವಲಗೊಳ್ಳಲಿದೆ' ಎಂದು ಬಣ್ಣಿಸಿದ್ದಾರೆ.
ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ರಾಜಸ್‌ಮಂಡ್‌ನಲ್ಲಿ ಪ್ರವಾಸೋದ್ಯಮ ಕುರಿತ ಯೋಜನೆಯೂ ಒಳಗೊಂಡಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯಡಿ ಪ್ರವಾಸಿಗರಿಗೆ ಮಾಹಿತಿ ಹಾಗೂ ಸಾಂಸ್ಕೃತಿಕ ಕೇಂದ್ರ ಸ್ಥಾಪನೆಯಾಗಲಿದೆ. ಐಐಐಟಿ ಕೋಟದ ಕಾಯಂ ಕ್ಯಾಂಪಸ್‌ಗೆ ಅಡಿಗಲ್ಲು ಸಮಾರಂಭವನ್ನೂ ಪ್ರಧಾನಿ ಮೋದಿ ನೆರವೇರಿಸಿದರು.
ಇದಾದ ನಂತರ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿದರು.