ಕೊಲಂಬೊ: ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ ಏಳು ದೇಶಗಳ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು ಮಂಗಳವಾರ ತಿಳಿಸಿದ್ದಾರೆ.
ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಶ್ರೀಲಂಕಾ ಈ ನಿರ್ಧಾರ ತೆಗೆದುಕೊಂಡಿದೆ.
ಉಚಿತ ಪ್ರವಾಸಿ ವೀಸಾ ನೀತಿಯನ್ನು ಪ್ರಾಯೋಗಿಕವಾಗಿ ಮಾರ್ಚ್ 31, 2024 ರವರೆಗೆ ಜಾರಿಗೆ ತರಲಾಗುವುದು ಎಂದು ವಿದೇಶಾಂಗ ಸಚಿವ ಸಬ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಪ್ರವಾಸಿಗರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಚಿತ ಪ್ರವೇಶಕ್ಕೆ ಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಈ ಏಳು ದೇಶಗಳ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ಯಾವುದೇ ಶುಲ್ಕವಿಲ್ಲದೆ ವೀಸಾಗಳನ್ನು ಪಡೆಯಬಹುದು.
ಭಾರತವು ಸಾಂಪ್ರದಾಯಿಕವಾಗಿ ಶ್ರೀಲಂಕಾದ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ 30,000ಕ್ಕೂ ಹೆಚ್ಚು ಭಾರತೀಯರು ಶ್ರೀಲಂಕಾಗೆ ಭೇಟಿ ನೀಡಿದ್ದು, ಅಗ್ರಸ್ಥಾನದಲ್ಲಿದೆ. 8 ಸಾವಿರ ಚೀನೀ ಪ್ರವಾಸಿಗರ ಭೇಟಿಯೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.