75 ವರ್ಷಗಳ ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಹಮಾಸ್ ಉಗ್ರರ ದಾಳಿಯಿಂದ 1,400 ಇಸ್ರೇಲಿಗರು ಮೃತಪಟ್ಟಿದ್ದು, ಸೇನಾ ಮುಖ್ಯಸ್ಥರು, ಮಿಲಿಟರಿ ಗುಪ್ತಚರ ಮುಖ್ಯಸ್ಥರು ಮತ್ತು ಶಿನ್ ಬೆಟ್ ಗುಪ್ತಚರ ಸೇವೆಯ ಮುಖ್ಯಸ್ಥರು ತಮ್ಮ ಸೇವೆಯಲ್ಲಿ ವಿಫಲವಾಗಿರುವುದನ್ನು ಒಪ್ಪಿಕೊಂಡಿದ್ದರು.
ಸರ್ಕಾರದ ನಾಯಕತ್ವ ಮತ್ತು ಭದ್ರತಾ ನಾಯಕತ್ವ ದೇಶವನ್ನು ರಕ್ಷಿಸುವಲ್ಲಿ ವಿಫಲವಾಗಿದ್ದು, ಈ ಕುರಿತಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟ ಹೇಳಿಕೆ ನೀಡಬೇಕಿದೆ ಎಂದು ಹಣಕಾಸು ಸಚಿವ ಬೆಜಲಿಲ್ ಸ್ಮೋಟ್ರಿಚ್ ಸಹ ಹೇಳಿದ್ದರು.
ಅಕ್ಟೋಬರ್ 7ರ ಹಮಾಸ್ ಉಗ್ರರ ದಾಳಿ ಕುರಿತಂತೆ ಹಲವು ಪ್ರಶ್ನೆಗಳಿವೆ. ಎಲ್ಲವನ್ನೂ ಕೂಲಂಕಷವಾಗಿ ತನಿಖೆ ನಡೆಸುವುದಾಗಿ ನೆತನ್ಯಾಹು ಇತ್ತೀಚೆಗೆ ಹೇಳಿದ್ದರು.
ನೆತನ್ಯಾಹು ಅವರ ಆಡಳಿತಾರೂಢ ಲಿಕುಡ್ ಪಕ್ಷದ ಮತದಾರರಲ್ಲಿಯೂ ಸಹ ಶೇಕಡ 69ರಷ್ಟು ಜನರು ನೆತನ್ಯಾಹು ಅವರೇ ಜವಾಬ್ದಾರಿ ಹೊರಬೇಕೆಂದು ಹೇಳಿದ್ದಾರೆ.
ಇದೇವೇಳೆ, ಕಳೆದ ವಾರ ಸರ್ವ ಪಕ್ಷಗಳ ಸರ್ಕಾರಕ್ಕೆ ಸೇರ್ಪಡೆಗೊಂಡ ಸೆಂಟ್ರಿಸ್ಟ್ ಪಕ್ಷದ ಮುಖ್ಯಸ್ಥ, ಮಾಜಿ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಅವರಿಗಿಂತ ನೆತನ್ಯಾಹು ಹಿಂದುಳಿದಿದ್ದಾರೆ ಎಂದು ಸಮೀಕ್ಷೆ ತೋರಿಸಿದೆ. ಶೇಕಡ 48 ರಷ್ಟು ಜನರು ಗ್ಯಾಂಟ್ಜ್ ಉತ್ತಮ ಪ್ರಧಾನ ಮಂತ್ರಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ, ನೆತನ್ಯಾಹು ಪರ ಕೇವಲ ಶೇಕಡ 28ರಷ್ಟು ಜನರಿದ್ದಾರೆ.
ಶೇಕಡ 65ರಷ್ಟು ಇಸ್ರೇಲಿಗರು ಇಸ್ರೇಲಿ ಪಡೆಗಳಿಂದ ಗಾಜಾದ ನೆಲದ ಮೇಲಿನ ಆಕ್ರಮಣವನ್ನು ಬೆಂಬಲಿಸುತ್ತಾರೆ ಎಂದು ಸಮೀಕ್ಷೆಯು ಸೂಚಿಸಿದೆ. ಸಮೀಕ್ಷೆಯನ್ನು ಅಕ್ಟೋಬರ್ 18 ಮತ್ತು 19 ರಂದು ನಡೆಸಲಾಗಿದೆ.