ನವದೆಹಲಿ: ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಅಧಿಕಾರಿಗಳನ್ನು ಸ್ವದೇಶಕ್ಕೆ ಕರೆತರಲು ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆ ನೀಡಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಇಸ್ರೇಲ್ ಪರ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಕಳೆದ ವಾರ ಕತಾರ್‌ನ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾದ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಅಧಿಕಾರಿಗಳ ಕುಟುಂಬದ ಸದಸ್ಯರನ್ನು ಸೋಮವಾರ ಅವರು ಭೇಟಿಯಾಗಿ ಮಾತುಕತೆ ನಡೆಸಿದರು.
'ಬಂಧಿತರ ಕುಟುಂಬದವರ ಕಳವಳ ಮತ್ತು ನೋವನ್ನು ಸರ್ಕಾರ ಹಂಚಿಕೊಳ್ಳಲಿದೆ. ಬಂಧಿತರ ಬಿಡುಗಡೆಗೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮುಂದುವರಿಸಲಿದೆ. ಅವರನ್ನು ದೇಶಕ್ಕೆ ಮರಳಿ ಕರೆತರಲು ಸರ್ಕಾರವು ಆ ಕುಟುಂಬದವರೊಂದಿಗೆ ನಿಕಟ ಸಮನ್ವಯ ಸಾಧಿಸಲಿದೆ' ಎಂದು ಜೈಶಂಕರ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಮ್ಮವರ ಬಿಡುಗಡೆಗೆ ಸರ್ಕಾರ ಕಾನೂನುಗಳ ಮೂಲಕ ಹೋರಾಟ ನಡೆಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ' ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಆರ್. ಹರಿಕುಮಾರ್ ಸೋಮವಾರ ಹೇಳಿದ್ದಾರೆ.
ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಕತಾರ್ ಅಥವಾ ಕೇಂದ್ರ ಸರ್ಕಾರ ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ. ಆದರೂ, ಕತಾರ್ ಸರ್ಕಾರವು ಬೇಹುಗಾರಿಕೆಯ ಆರೋಪ ಹೊರಿಸಿದೆ ಎಂದು ಮೂಲಗಳು ತಿಳಿಸಿವೆ.
ಕತಾರ್‌ಗೆ ಸುಧಾರಿತ ಸ್ಟೆಲ್ತ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಯೋಜನೆಯ ಬಗ್ಗೆ ಇಸ್ರೇಲ್‌ಗೆ ರಹಸ್ಯ ಮಾಹಿತಿ ರವಾನಿಸಿದ ಆರೋಪವನ್ನು ಈ ಎಂಟು ಮಂದಿ ಮೇಲೆ ಹೊರಿಸಲಾಗಿದೆ.
ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಅವರನ್ನು 2022ರ ಆಗಸ್ಟ್ 30ರಂದು ಕತಾರ್ ಗುಪ್ತಚರ ಸೇವೆ ವಿಭಾಗವು ದೋಹಾದಲ್ಲಿ ಬಂಧಿಸಿದೆ. ಬಂಧಿತರೆಲ್ಲರೂ ಅಲ್ ದಹ್ರಾ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರು. ಈ ಕಂಪನಿ ಭದ್ರತಾ ಏಜೆನ್ಸಿಗಳು ಮತ್ತು ಕತಾರ್‌ನ ರಕ್ಷಣಾ ಪಡೆಗಳಿಗೆ ತರಬೇತಿ ಮತ್ತು ಇತರ ಹಲವಾರು ಸೇವೆಗಳನ್ನು ಒದಗಿಸುತ್ತಿತ್ತು.
ಕಂಪನಿಯ ಸಿಬ್ಬಂದಿಯಲ್ಲಿ 70ಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳು. ತನ್ನ ಅಧಿಕಾರಿಗಳನ್ನು ಬಂಧಿಸಿ ಜೈಲಿನಲ್ಲಿಟ್ಟ ನಂತರ, ಕಳೆದ ಮೇ ತಿಂಗಳಿಂದ ಕಂಪನಿಯು ಕತಾರ್‌ನಲ್ಲಿ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದೆ.