ದೇರ್ ಅಲ್-ಬಲಾಹ್: ಹಮಾಸ್ ವಿರುದ್ಧ ಇಸ್ರೇಲ್ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ಈ ಯುದ್ಧದಲ್ಲಿ ಇದುವರೆಗೂ ಪ್ಯಾಲಿಸ್ಟೈನ್ನಲ್ಲಿ ಸುಮಾರು 8ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಗಾಜಾಪಟ್ಟಿ ಮೇಲೆ ಇಸ್ರೇಲ್ ಬಾಂಬ್ ದಾಳಿಯನ್ನು ಮುಂದುವರೆಸಿದ್ದು, ಹಮಾಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ.ಹಮಾಸ್ನ ಮೆಟ್ರೋ ಸುರಂಗಗಳನ್ನು ಟಾರ್ಗೆಟ್ ಮಾಡಿರುವ ಇಸ್ರೇಲ್ ಪಡೆಗಳು ವಾಯು ದಾಳಿಯ ಜತೆ ಎಚ್ಚರಿಕೆಯ ಭೂ ದಾಳಿ ನಡೆಸುತ್ತಿದೆ. ಪರಿಣಾಮ 8ಸಾವಿರಕ್ಕೂ ಹೆಚ್ಚು ಪ್ಯಾಲಿಸ್ಟೈನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆಂದು ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಹಮಾಸ್ ದಾಳಿಯಲ್ಲಿ 1400 ಇಸ್ರೇಲಿಗಳು ಮೃತಪಟ್ಟಿದ್ದಾರೆ. ಒಟ್ಟಾರೆ ಈ ಯುದ್ಧದಲ್ಲಿ ಇದುವರೆಗೂ ಅಂದಾಜು 10 ಸಾವಿರ ಪ್ರಾಣಗಳು ಬಲಿಯಾಗಿವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ತುರ್ತು ಕದನ ವಿರಾಮ ಘೋಷಣೆ ಮಾಡುವಂತೆ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸಿದ್ದರೂ ಇದಕ್ಕೆ ಬಗ್ಗದ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧವನ್ನು ಮುಂದುವರೆಸಿದೆ. ಇಸ್ರೇಲ್ ಗಾಜಾಪಟ್ಟಿಗೆ ಇರುವ ಎಲ್ಲ ಸಂಪರ್ಕಗಳನ್ನು ತೆಗೆದು ಹಾಕುವ ದಾಳಿಯನ್ನು ಮುಂದುವರೆಸಿದೆ,
ಈ ನಡುವೆ ಹೆಚ್ಚಿನ ಗಾಜಾ ನಿವಾಸಿಗಳು ಯುದ್ಧದಿಂದಾಗಿ ಗಾಜಾದಾ ದಕ್ಷಿಣ ಭಾಗಕ್ಕೆ ಪಲಾಯನ ಮಾಡಿದ್ದಾರೆ ಎಂದು ಇಸ್ರೇಲ್ ಹೇಳಿದೆ.