ಗುರುವಾಯೂರು: ಗುರುವಾಯೂರು ದೇವಸ್ವಂ ನೀಡುವ ಈ ವರ್ಷದ ಶ್ರೀ ಗುರುವಾಯೂರಪ್ಪನ್ ಚೆಂಬೈ ಪ್ರಶಸ್ತಿಗೆ ಖ್ಯಾತ ಕರ್ನಾಟಕ ಸಂಗೀತಗಾರ ಪದ್ಮಭೂಷಣ ಮಧುರೈ ಟಿ.ಎನ್. ಶೇಷಗೋಪಾಲ್ ಆಯ್ಕೆಯಾಗಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.
ಚೆಂಬೈ ಪ್ರಶಸ್ತಿಯು ಶ್ರೀ ಗುರುವಾಯೂರಪ್ಪನ್ ಚಿತ್ರ ಕೆತ್ತನೆ ಮಾಡಿದ 10 ಗ್ರಾಂ ಚಿನ್ನದ ಪದಕ, 50,001 ರೂ ನಗದು, ಪ್ರಶಸ್ತಿಪತ್ರ, ಫಲಕವನ್ನು ಒಳಗೊಂಡಿದೆ. ನವೆಂಬರ್ 8ರಂದು ಗುರುವಾಯೂರ್ ಏಕಾದಶಿಯಂದು ದೇವಸ್ವಂ ಆಯೋಜಿಸಿರುವ ಚೆಂಬೈ ಸಂಗೀತೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದೇವಸ್ವಂ ಅಧ್ಯಕ್ಷ ಡಾ. ವಿಕೆ ವಿಜಯನ್ ಅಧ್ಯಕ್ಷತೆಯ ಗುರುವಾಯೂರು ದೇವಸ್ವಂ ಆಡಳಿತ ಮಂಡಳಿ ಪ್ರಶಸ್ತಿಗೆ ಆಯ್ಕೆಮಾಡಿರುವರು. ಖ್ಯಾತ ಕರ್ನಾಟಕ ಸಂಗೀತಗಾರರಾದ ಮಣ್ಣೂರು ರಾಜಕುಮಾರನುಣ್ಣಿ, ಎ. ಅನಂತಪದ್ಮನಾಭನ್, ತ್ರಿಪುಣಿತುರ ಎನ್. ರಾಧಾಕೃಷ್ಣನ್, ದೇವಸ್ವಂ ಆಡಳಿತ ಮಂಡಳಿ ಸದಸ್ಯ ಮನೋಜ್ ಬಿ. ನಾಯರ್ ಅವರನ್ನು ಒಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸನ್ನು ದೇವಸ್ವಂ ಆಡಳಿತ ಮಂಡಳಿ ಒಪ್ಪಿಕೊಂಡಿದೆ.
2005 ರಲ್ಲಿ, ದೇವಸ್ವಂ ಶ್ರೀಗುರುವಾಯೂರಪ್ಪನ್ ಚೆಂಬೈ ಪುರಸ್ಕಾರವನ್ನು ಪ್ರಾರಂಭಿಸಿತು. ಟಿ.ವಿ ಗೋಪಾಲಕೃಷ್ಣನ್ (ಗಾಯನ) ಮೊದಲ ವರ್ಷದ ಬಹುಮಾನ ಪಡೆದವರು. ಮಧುರೈ ಟಿಎನ್ ಶೇಷಗೋಪಾಲನ್ ಅವರು 2019ನೇ ವರ್ಷದ ಪ್ರಶಸ್ತಿ ಪುರಸ್ಕøತರು. ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯರಾದ ಮಲ್ಲಿಸ್ಸೇರಿ ಪರಮೇಶ್ವರನ್ ನಂಬೂದಿರಿಪಾಡ್, ಪಿ.ಸಿ. ದಿನೇಶನ್ ನಂಬೂದಿರಿಪಾಡ್, ಸಿ. ಮನೋಜ್, ಚೆಂಗಾರ ಸುರೇಂದ್ರನ್, ಕೆ.ಆರ್. ಗೋಪಿನಾಥ್, ಮನೋಜ್ ಬಿ. ನಾಯರ್, ವಿ.ಜಿ. ರವೀಂದ್ರನ್ ಮತ್ತು ದೇವಸ್ವಂ ಆಡಳಿತಾಧಿಕಾರಿ ಕೆ.ಪಿ.ವಿನಯನ್ ಉಪಸ್ಥಿತರಿದ್ದರು.