ನವದೆಹಲಿ: ಕೇಂದ್ರದ ಮಾಜಿ ಸಚಿವರು, ಹಾಲಿ ಸಂಸದರೂ ಆಗಿರುವವರ ಉಳಿತಾಯ ಖಾತೆಯಿಂದ ಸಾವಿರಾರು ರೂಪಾಯಿ ಎಗರಿಸಿದ ಪ್ರಕರಣವೊಂದು ನಡೆದಿದೆ. ಈ ಸಂಬಂಧ ಸಂಸದರು ಬ್ಯಾಂಕ್ನ ನಡೆ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ರೀತಿ ಹಣ ಕಳೆದುಕೊಂಡಿರುವುದು ಕೇಂದ್ರದ ಮಾಜಿ ಸಚಿವ, ಚೆನ್ನೈ ಸೆಂಟ್ರಲ್ ಸಂಸದ ದಯಾನಿಧಿ ಮಾರನ್.
ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ಭಾನುವಾರ ತಮಗೆ ಹೀಗಾಗಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಆಯಕ್ಸಿಸ್ ಬ್ಯಾಂಕ್ನಲ್ಲಿರುವ ನನ್ನ ಉಳಿತಾಯ ಖಾತೆಯಿಂದ 99,999 ರೂಪಾಯಿಯನ್ನು ನೆಟ್ ಬ್ಯಾಂಕಿಂಗ್ ಮೂಲಕ ಲಪಟಾಯಿಸಲಾಗಿದೆ ಎಂದಿದ್ದಾರೆ.
ನನ್ನ ನೋಂದಾಯಿತ ಮೊಬೈಲ್ ನಂಬರ್ಗೆ ಈ ವಹಿವಾಟಿನ ಕುರಿತು ಒಟಿಪಿ ಕೂಡ ಬಂದಿರಲಿಲ್ಲ. ಆದರೆ ಜಂಟಿ ಖಾತೆದಾರರಾಗಿರುವ ತಮ್ಮ ಪತ್ನಿಯ ನಂಬರ್ಗೆ ಬ್ಯಾಂಕ್ನವರು ಎಂಬುದಾಗಿ ಹೇಳಿ ಕರೆಯೊಂದು ಬಂದಿತ್ತು ಎಂದು ದಯಾನಿಧಿ ಮಾರನ್ ತಿಳಿಸಿದ್ದಾರೆ. ಆದರೆ ಕರೆ ಬಂದ ನಂಬರ್ನ ಡಿಪಿಯಲ್ಲಿ ತೆರಿಗೆ ಇಲಾಖೆಗೆ ಸಂಬಂಧಿತ ಚಿತ್ರವಿತ್ತು. ಅಷ್ಟರೊಳಗೆ ಅನುಮಾನ ಬಂದು ಬ್ಯಾಂಕ್ಗೆ ಕರೆ ಮಾಡಿ ಬ್ಲಾಕ್ ಮಾಡಲು ಹೇಳಿದ್ದರೂ ಪ್ರಯೋಜನ ಆಗಿಲ್ಲ ಎಂದಿದ್ದಾರೆ.
ಅವರು ಅದು ಹೇಗೆ ಅಷ್ಟು ಸುಲಭದಲ್ಲಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿ, ಎಲ್ಲ ಸುರಕ್ಷತಾ ಕ್ರಮಗಳನ್ನು ಭೇದಿಸಿ ಹಣ ಲಪಟಾಯಿಸಿದರು ಎಂಬ ಬಗ್ಗೆ ನನಗೆ ಅಚ್ಚರಿ ಉಂಟಾಗಿದೆ. ಈ ಕುರಿತು ಬ್ಯಾಂಕ್ನವರಿಗೆ ಯಾವ ಸುಳಿವೂ ಸಿಕ್ಕಿಲ್ಲ, ಅಲ್ಲದೆ ಟ್ರಾನ್ಸ್ಯಾಕ್ಷನ್ಗೆ ಒಟಿಪಿ ಯಾಕೆ ಬಂದಿಲ್ಲ ಎಂಬ ಬಗ್ಗೆಯೂ ಬ್ಯಾಂಕ್ನವರಿಂದ ಸೂಕ್ತ ಸಮಜಾಯಿಷಿ ಎಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಡೇಟಾ ಹಾಗೂ ತಾಂತ್ರಿಕ ಅರಿವು ಇರುವವರಿಗೇ ಹೀಗಾಗುತ್ತೆ ಎಂದಾದಲ್ಲಿ, ಡಿಜಿಟಲ್ ವಹಿವಾಟು ಕುರಿತು ಸರಿಯಾಗಿ ಅರಿವಿರದ ಅಥವಾ ಹಿರಿಯ ನಾಗರಿಕರ ವಿಷಯದಲ್ಲಿ ಇದು ಇನ್ನೆಷ್ಟು ಸುರಕ್ಷಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.