ನವದೆಹಲಿ:ದೇಶದಲ್ಲಿ ಕಳೆದ 9 ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಹಾಗೂ ಕೇಂದ್ರ ಸರಕಾರವು ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ತೀವ್ರ ಚಿಕಿತ್ಸಾ ಘಟಕ (ಸಿಸಿಯು)ವನ್ನು ಸ್ಥಾಪಿಸುತ್ತಿದೆಯೆಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ರವಿವಾರ ತಿಳಿಸಿದ್ದಾರೆ.
ಈಶಾನ್ಯ ಇಂದಿರಾಗಾಂಧಿ ಆರೋಗ್ಯ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆ (ನೈಗ್ರಹಮ್ಸ್)ಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆಯು 2014ರಲ್ಲಿ 50 ಸಾವಿರ ಇದ್ದುದು,ಈಗ 1.7 ಲಕ್ಷಕ್ಕೇರಿದೆ ಎಂದರು.
ನೂತನ ವೈದ್ಯಕೀಯ ಪದವಿ ಕಾಲೇಜು, ನೂತನ ನರ್ಸಿಂಗ್ ಕಾಲೇಜ್ ಕಟ್ಟಡ, ಎಂಟು ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತಿತರ ಸಂಸ್ಥಾಪನೆಗಳನ್ನು ಉದ್ಘಾಟಿಸಿದರು.
''ಕಳೆದ 9 ವರ್ಷಗಳಲ್ಲಿ, ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ. ಒಟ್ಟು 1.70 ಲಕ್ಷ ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲಾಗಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ತೀವ್ರ ಚಿಕಿತ್ಸಾ ಘಟಕವನ್ನು ನಿರ್ಮಿಸಲಾಗುತ್ತಿದೆ. ನೈಗ್ರಹಾಮ್ಸ್ ಸಂಸ್ಥೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ನಾವು ಹೊಂದಿದ್ದೇವ ಎಂದರು ಹೇಳಿದರು.
ನೈಗ್ರಹಾಮ್ಸ್ ನಲ್ಲಿ 150 ಹಾಸಿಗೆಗಳ ತೀವ್ರ ನಿಗಾ ಬ್ಲಾಕ್ ಗೂ ಅವರು ಶಿಲಾನ್ಯಾಸ ಮಾಡಿದರು.
ಈ ನೂತನ ಸೌಲಭ್ಯಗಳು ಈಶಾನ್ಯ ಭಾರತದ ಜನತೆಗೆ ಅತ್ಯಂತ ಅವಶ್ಯಕವಿರುವ ಆರೋಗ್ಯಪಾಲನಾ ಸೇವೆಗಳನ್ನು ಒದಗಿಸಲಿದೆ. ಈ ಪ್ರದೇಶದ ಆರೋಗ್ಯ ಮೂಲಸೌಕರ್ಯಗಳನನು ಸುಧಾರಣೆಗೊಳಿಸಲು ಕೇಂದ್ರ ಸರಕಾರವು ಬದ್ಧವಾಗಿದೆ ಎಂದವರು ಹೇಳಿದರು.