ನವದೆಹಲಿ: ಭಾರತೀಯ ವಾಯುಪಡೆ ದಿನಾಚರಣೆ (ಅಕ್ಟೋಬರ್ 08) ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯ ಸಲ್ಲಿಸಿದ್ದಾರೆ.
ವಾಯುಪಡೆಯ ದಿನಾಚರಣೆಯಂದು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ. ವಾಯುಪಡೆಯ ಶೌರ್ಯ, ಬದ್ಧತೆ ಮತ್ತು ಸಮರ್ಪಣೆಯ ಬಗ್ಗೆ ಇಡೀ ದೇಶ ಹೆಮ್ಮೆಪಟ್ಟುಕೊಳ್ಳುತ್ತದೆ. ಅವರ ತ್ಯಾಗ ಹಾಗೂ ಸೇವೆಯಿಂದ ನಮ್ಮ ಆಕಾಶವು ಸುರಕ್ಷಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸಂದೇಶದಲ್ಲಿ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ದೇಶದ ಹಿತಾಸಕ್ತಿಯನ್ನು ಕಾಯಲು ಲೋಹದ ಹಕ್ಕಿ ಮತ್ತು ಯೋಧರ ಕೊಡುಗೆಯನ್ನು ಸ್ಮರಿಸಿದ್ದಾರೆ. ದೇಶದ ಸೌರ್ವಭೌಮತ್ವ ರಕ್ಷಿಸಲು ವಾಯುಪಡೆಯ ಅಮೂಲ್ಯ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವುದಾಗಿ ಹೇಳಿದ್ದಾರೆ.
ಭಾರತವನ್ನು ಸುರಕ್ಷಿತವಾಗಿರಿಸಲು ವಾಯುಪಡೆಯ ಕೊಡುಗೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ಮರಿಸಿದ್ದಾರೆ. ಭಾರತದ ವಾಯುಪಡೆಯು ಜಗತ್ತಿನ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಉಲ್ಲೇಖಿಸಿದ್ದಾರೆ.