ಕಾಸರಗೋಡು: ವಿಶ್ವಕ್ಕೆ ಸಾಮರಸ್ಯದ ಬೋಧನೆ ಸಾರಿರುವ ಸನಾತನ ಧರ್ಮವನ್ನು ಅಸ್ಥಿರಗೊಳಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂಬುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಭಾನುವಾರ ಅಭೂತಪೂರ್ವವಾಗಿ ಆಯೋಜಿಸಲಾಗಿದ್ದ ‘ಭಕ್ತರ ನಡಿಗೆ ಭಗವಂತನೆಡೆಗೆ’ ಕಾರ್ಯಕ್ರಮದನ್ವಯ ಎಡನೀರು ಮಠದಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಡೆದ ಪಾದಯಾತ್ರೆ ಸಂದರ್ಭ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಪ್ರತಿಯೊಬ್ಬನಲ್ಲಿ ಧಾರ್ಮಿಕ ಪ್ರಜ್ಞೆ ಒಡಮೂಡಿದಾಗ ಸಮಾಜದಲ್ಲಿ ಸಾಮರಸ್ಯ ಕಂಡುಕೊಳ್ಳಲು ಸಾಧ್ಯ. ಎಡನೀರಿನಿಂದ ಮಲ್ಲ ಕ್ಷೇತ್ರಕ್ಕೆ ನಡೆಸಿರುವುದು ಸಾಮರಸ್ಯದ ಪಾದಯಾತ್ರೆಯಾಗಿದ್ದು, ಜಾತಿ, ಮತ, ಪಕ್ಷ ಭೇದ ಮರೆತು ಜನತೆ ಒಂದಾಗಿ ಹೆಜ್ಜೆಹಾಕಿರುವುದು ಸಂತಸ ತಂದುಕೊಟ್ಟಿದೆ ಎಂದು ತಿಳಿಸಿದರು.
ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ನವರಾತ್ರಿಯ ಪರ್ವಕಾಲದಲ್ಲಿ ಆಯೋಜಿಸಿರುವ ಪಾದಯಾತ್ರೆ, ಸಮಾಜದಲ್ಲಿ ಶಾಂತಿ, ಸಾಮರಸ್ಯಕ್ಕೆ ಹಾದಿಮಾಡಿಕೊಡಲಿದೆ. ಪ್ರತಿಯೊಬ್ಬ ಸನಾತನ ಸಂಸ್ಕøತಿಯ ವಾರೀಸುದಾರನಾದಾಗ ಧರ್ಮದ ನೆಲೆಗಟ್ಟು ಭದ್ರವಾಗಲು ಸಾಧ್ಯ. ಮನಸ್ಸಿನ ಶುದ್ಧೀಕರಣಕ್ಕೆ ಗುರುಗಳ ಅನುಗ್ರಹ ಅಗತ್ಯ. ಪಾದಯಾತ್ರೆಯ ಮೂಲಕ ಗುರುಗಳ ಜತೆ ಹೆಜ್ಜೆ ಹಾಕುವುದರ ಜತೆಗೆ ಸತ್ಪಥದತ್ತ ಸಾಗುವ ಸಂಕಲ್ಪ ಪ್ರತಿಯೊಬ್ಬ ಕೈಗೊಳ್ಳಬೇಕು ಎಂದು ತಿಳಿಸಿದರು. ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಆಶಯ ಮಾತುಗಳನ್ನಾಡಿದರು. ರವೀಶ ತಂತ್ರಿ ಕುಂಟಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಯತಿದ್ವಯರ ಜತೆ ಹೆಜ್ಜೆಹಾಕಿದ ಭಕ್ತಾದಿಗಳು:
ಸಮಾಜದ ಶಾಂತಿ ಮತ್ತು ಒಗ್ಗಟ್ಟಿಗಾಗಿ ಭಕ್ತರ ನಡಿಗೆ ಭಗವಂತನೆಡೆಗೆ ಎಂಬ ಸಂದೇಶದೊಂದಿಒಗೆ ಎಡನೀರು ಮಠದಿಂದ ಬೆಳಗ್ಗೆ 6.45ಕ್ಕೆ ಆರಂಭಗೊಂಡ ಪಾದಯಾತ್ರೆ ಬೋವಿಕ್ಕಾನ ಸನಿಹದ ಪೊವ್ವಲ್ ಶ್ರೀ ಹನುಮಾನ್ ಕೋಟೆಗೆ ಪ್ರದಕ್ಷಿಣೆ ನಡೆಸಿ, ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಮೂಲಕ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತಲುಪಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ ನೆಲ್ಲಿಕುನ್ನು, ರಮೇಶ್ ಕಾಸರಗೋಡು, ಅರ್ಜುನನ್ ತಾಯಲಂಗಾಡಿ, ವಕೀಲ ನಾರಾಯಣ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಗೋಪಾಲ್ ಚೆಟ್ಟಿಯಾರ್ ಮೊದಲಾದವರು ಸ್ವಾಮೀಜಿಗಳೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು. ಪಾದಯಾತ್ರೆ ಹಾದಿಯುದ್ದಕ್ಕೂ ಜನರು ಸ್ವಾಗತಕೋರಿ ಮುಂದಕ್ಕೆ ಬೀಳ್ಕೊಟ್ಟರು.
ಬೋವಿಕ್ಕಾನ ಪೊವ್ವಲ್ ಆಸುಪಾಸು ಮುಸ್ಲಿಂ ಬಾಂಧವರು ಸ್ವಾಮೀಜಿಗಳನ್ನು ಹಾರಾರ್ಪಣೆಗೈದು ಸ್ವಾಗತಿಸಿ, ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಪಾನೀಯ ವಿತರಿಸಿದರು.