ಕಾಸರಗೋಡು: ಕೊಚ್ಚಿ ಕಳಮಶ್ಯೇರಿಯ ಯಹೋವನ ಸಾಕ್ಷಿಗಳ ಚರ್ಚ್ ಕನ್ವೆನ್ಶನ್ ಹಾಲ್‍ನಲ್ಲಿ ನಡೆದ ಬಾಂಬ್ ಸ್ಪೋಟ ಹಿನ್ನೆಲೆಯಲ್ಲಿ ಪೊಲೀಸರು ಕೇರಳಾದ್ಯಂತ ಜಾಗ್ರತಾ ನಿರ್ದೇಶ ನೀಡಿದ್ದು, ಜನನಿಬಿಡ ಪ್ರದೇಶಗಳಲ್ಲಿ ಭದ್ರತೆ ಬಿಗುಗೊಳಿಸಲಾಗಿದೆ.
ಕಾಸರಗೋಡು ರೈಲ್ವೆ ನಿಲ್ದಾಣ, ಶಾಪಿಂಗ್ ಮಾಲ್, ಖಾಸಗಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಆರಾಧನಾಲಯ ವಠಾರ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲೊ ಪೊಲೀಸ್ ಬಂದೋಬಸ್ತ್ ಚುರುಕುಗೊಳಿಸಲಾಗಿದೆ. ಚಿತ್ರಮಂದಿರ, ಪ್ರವಾಸಿ ತಾಣಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ರೈಲ್ವೆ ಭದ್ರತಾ ಪಡೆ, ಕೇರಳ ಪೊಲೀಸ್, ಶ್ವಾನದಳ, ಬಾಂಬ್ ಸ್ಕ್ವೇಡ್ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದೆ. ಕಾಸರಗೋಡು ಡಿವೈಎಸ್‍ಪಿ ಪಿ.ಕೆ ಸುಧಾಕರನ್, ಆರ್‍ಪಿಎಫ್ ಕದಿರೇಶ್ ಬಾಬು, ರೈಲ್ವೆ ಠಾಣೆ ಎಸ್.ಐ ರಜಿಕುಮಾರ್, ಎ.ಎಸ್.ಐ ಎಂ.ಪಿ ಪ್ರಕಾಶನ್ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದೆ.
ಕಣ್ಣೂರು, ಕೋಯಿಕ್ಕೋಡ್ ರೈಲ್ವೆ ನಿಲ್ದಾಣಗಳಲ್ಲೂ ತಪಾಸಣೆ ಚುರುಕುಗೊಳಿಸಲಾಗಿದೆ. ಉತ್ಸವ ನಡೆಯುತ್ತಿರುವ ಆರಾಧನಾಲಯಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆಯೂ ರಾಜ್ಯ ಪೊಲೀಸ್ ಇಲಾಖೆ ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದೆ.
ಕೊಚ್ಚಿ ಕಳಮಶ್ಯೇರಿಯ ಯಹೋವನ ಸಾಕ್ಷಿಗಳ ಚರ್ಚ್ ಕನ್ವೆನ್ಶನ್ ಹಾಲ್‍ನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಒಬ್ಬಾಕೆ ಮಹಿಳೆ ಮೃತಪಟ್ಟಿದ್ದಾರೆ. 52ಮಂದಿ ಗಾಯಾಳುಗಳು ಚಿಕಿತ್ಸೆಯಲ್ಲಿದ್ದು, ಇವರಲ್ಲಿ 18ಮಂದಿ ತೀವ್ರ ನಿಗಾ ವಿಭಾಗದಲ್ಲಿದ್ದಾರೆ. ಇವರಲ್ಲಿ 12ರ ಬಾಲಕಿಯೊಬ್ಬಳ ಸ್ಥಿತಿ ಚಿಂತಾಜನಕವಾಗಿ ಮುಂದುವರಿದಿರುವುದಾಗಿ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕಳಮಶ್ಯೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಆಸ್ಟರ್ ಮೆಡಿಸಿಟಿ ಸಏರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆಯಲ್ಲಿದ್ದಾರೆ. ಚಿಕಿತ್ಸೆಪಡೆಯುತ್ತಿರುವವರ ಮಾಹಿತಿಗಾಗಿ ಹೆಲ್ಪ್‍ಲೈನ್ ಕಾರ್ಯಾಚರಿಸುತ್ತಿರುವುದಾಗಿ ಸಚಿವೆ ತಿಳಿಸಿದ್ದಾರೆ.