ಕುಂಬಳೆ: ಕುಬಣೂರಿನಲ್ಲಿ ಜುಗಾರಿ ತಂಡದ ದಾಳಿಗೆ ತುತ್ತಾಗಿ ಬೆನ್ನುಮೂಳೆಗೆ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿರುವ ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಕುಟುಂಬದ ಸದಸ್ಯರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪೋಲೀಸರ ಮಾಹಿತಿದಾರನೆಂದು ವೃಥಾ ಆರೋಪಿಸಿ ಆರಿಕ್ಕಾಡಿಯ ಫಾರ್ಮಸಿ ಉದ್ಯೋಗಿ, ಕುಬಣೂರಿನ ಸುನೀಲ್ ಎಂಬಾತನನ್ನು ಜುಗಾರಿ ತಂಡದ ಏಳರಷ್ಟು ಮಂದಿಯ ತಂಡ ಥಳಿಸಿತ್ತು.
ಗಾಯಗೊಂಡ ಸುನೀಲ್ ಅವರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಕುಂಬಳೆ ಪೋಲೀಸರು ಹೇಳಿಕೆ ಪಡೆದಿದ್ದರು. ಆದರೆ ನಂತರ ಆರೋಪಿಗಳ ವಿರುದ್ಧ ಕೇವಲ ಸಣ್ಣ ಸೆಕ್ಷನ್‍ಗಳನ್ನು ಮಾತ್ರ ಹೊರಿಸಿ ನಿರ್ಲಕ್ಷ್ಯ ವಹಿಸಿರುವರೆಂದು ಕುಟುಂಬ ಆರೋಪಿಸಿದೆ.
ಆರೋಪಿಗಳನ್ನು ಸಂರಕ್ಷಿಸು ಹಾದಿಯಲ್ಲಿ ಪೋಲೀಸ್ ನಡೆ ಶಂಕೆ ಮೂಡಿಸಿದೆ. ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಆನಂದ ಬಾಯಿಕಟ್ಟೆ, ಕೃಷ್ಣ ಪಂಜ, ಜನಾರ್ದನ, ಜಯಂತ ಮಾಹಿತಿ ನೀಡಿದರು.