ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನ ಸೇವಾ ಸಹಯೋಗದೊಂದಿಗೆ ನವರಾತ್ರಿ ಮಹೋತ್ಸವ ಅ. 15ರಿಂದ 24ರ ವರೆಗೆ ದೇವಸ್ಥಾನದಲ್ಲಿ ಜರುಗಲಿದೆ.
15ರಂದು ಬೆಳಗ್ಗೆ 9ರಿಂದ ಶ್ರೀ ವೆಂಕಟರಮಣ ಬಾಲಗೋಕುಲ ವಿದ್ಯಾರ್ಥಿಗಳಿಂದ ಭಜನೆ, ಮಧ್ಯಾಹ್ನ 2.30ಕ್ಕೆ ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರದ ಆರನೇ ವಾಷಿಕೋತ್ಸವದ ಉದ್ಘಾಟನೆ, ಗೌರವಾರ್ಪಣೆ, ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ 'ವಾಲಿ ಮೋಕ್ಷ-ಇಂದ್ರಜಿತು ಕಾಳಗ'ಯಕ್ಷಗಾನ ಬಯಲಾಟ, ಸಂಜೆ 7ಕ್ಕೆ ಭಜನೆ ನಡೆಯುವುದು.
ಪ್ರತಿ ದಿನ ಭಜನೆ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗುವುದು. 22ರಂದು ಬೆಳಗ್ಗೆ 10ರಿಂದ ಶ್ರೀದೇವರಿಗೆ ಶ್ರೀಗಂಧ ಲೇಪಿತ ಅಲಂಕಾರ, ಸಂಜೆ 7ಕ್ಕೆ ಕೂಡ್ಲು ಕುತ್ಯಾಳ ಯಕ್ಷಗಾನ ತರಬೇತಿ ಕೇಂದ್ರ ವಿದ್ಯಾರ್ಥಿಗಳಿಂದ ಮೀನಾಕ್ಷಿ ಕಲ್ಯಾಣ'ಯಕ್ಷಗಾನ ಬಯಲಾಟ ನಡೆಯುವುದು. 23ರಂದು ಬೆಳಗ್ಗೆ 7ಕ್ಕೆ ಆಯುಧಪೂಜೆ, ಸಂಜೆ 6ಕ್ಕೆ ವಿಶ್ವರೂಪದರ್ಶನ, 7ಕ್ಕೆ ಸಿಂಧು ಭಾಸ್ಕರನ್ ನಾಟ್ಯಾಲಯ ಸಿಷ್ಯ ವೃಂದದಿಂದ ನೃತ್ಯ ಕಾರ್ಯಕ್ರಮ, ರಾತ್ರಿ 9.30ಕ್ಕೆ ಶ್ರೀದೇವರ ಉತ್ಸವ ಬಲಿ, ಅಶ್ವತ್ಥಕಟ್ಟೆಗೆ ಘೊಷಯಾತ್ರೆ ನಡೆಯುವುದು.
24ರಂದು ಬೆಳಗ್ಗೆ ತೆನೆ ತುಂಬಿಸುವುದು, ಮಧ್ಯಾಹ್ನ ನವಾನ್ನ, ಸಂಜೆ 5ರಿಂದ ತ್ಯಾಗರಾಜ ಸಂಗೀತ ಸಭಾ ಕಾಸರಗೋಡು ಮತ್ತು ಶ್ರೀಪುರಂದರ ದಾಸ ಸಂಗೀತ ಕಲಾ ಮಂದಿರ ಕಾಸರಗೋಡು ವತಿಯಿಂದ ಸಂಗೀತ ಸೇವೆ, ರಾತ್ರಿ 9.30ಕ್ಕೆ ಶ್ರೀದೇವರ ಘೋಷಯಾತ್ರೆ, ಹುಲಿವೇಷಧಾರಿಗಳ ಕುಣಿತ, ಛದ್ಮವೇಷ ಪ್ರದರ್ಶನ, ರಾತ್ರಿ 11.30ಕ್ಕೆ ಕಟ್ಟೆಪೂಜೆ, ಶ್ರೀಕ್ಷೇತ್ರದಲ್ಲಿ ದರ್ಶನಬಲಿ, ರಾಜಾಂಗಣ ಪ್ರಸಾದ ನಡೆಯುವುದು.