ಉಪ್ಪಳ: ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 20 ನೇ ಚಾತುರ್ಮಾಸ್ಯದ ಮಂಗಲೋತ್ಸವ ಗುರುವಾರ ನಡೆಯಿತು. ಈ ಸಂದರ್ಭ ನಡೆದ 48 ಗಂಟೆಗಳ ಅಖಂಡ ಭಜನೆಯ ಮಂಗಲ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳವರು ಆಶೀರ್ವಚನಗೈದು, ಮಠದ ಬೆಳವಣಿಗೆಗೆ ಭಕ್ತಿ, ಜೊತೆಗೆ ಭಾವನೆಗಳ ಹೃದಯ ಬಂಧ ಕಾರಣ. ಹೆತ್ತ ಮಾತೆಯಿಂದ ಅನೇಕ ಸಜ್ಜನ ಬಂಧುಗಳ ಭಾವನಾತ್ಮಕ ಮತ್ತು ಸರ್ವ ರೀತಿಯ ನೆರವಿನಿಂದ ಅನೇಕ ಚಟುವಟಿಕೆಗಳು ಸಾಧ್ಯವಾಗಿ ಕೊಂಡೆವೂರು ಮಠವಿಂದು ಸನಾತನ ಧರ್ಮದ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ನುಡಿದರು.
ಧಾರ್ಮಿಕ ಮುಖಂಡ ಕೈಯೂರು ನಾರಾಯಣ ಭಟ್, ಪ್ರಗತಿಪರ ಕೃಷಿಕ ದಾಮೋದರ ಭಟ್ ಉಬರಳೆ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಜೆ.ಎಸ್.ಎನ್.ಎಂ. ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಶಶಿಧರ ಶೆಟ್ಟಿ ಗ್ರಾಮಚಾವಡಿ, ಉದ್ಯಮಿ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಯು.ಎಂ.ಭಾಸ್ಕರ್ ಮತ್ತು ರಘು ಸಿ.ಚೆರುಗೋಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಖ್ಯಾತ ವೈದ್ಯ ಡಾ.ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಮಠದ ಸನಾತನ ಧರ್ಮ ಬೆಳವಣಿಗೆಯ ಚಟುವಟಿಕೆಗಳಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ಶ್ರೀಮಠದಲ್ಲಿ ನಡೆದ ಅಗ್ನಿವೀರ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, ಇದೀಗ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಬಂಬ್ರಾಣದ ಅನ್ವಿತ್ ಕೆ.ವಿ.ಮತ್ತು ಕುಂಬಳೆಯ ಪ್ರತೀಕ್ ರವರುಗಳನ್ನು ಅವರ ಕುಟುಂಬದವರ ಸಮ್ಮುಖದಲ್ಲಿ ಶ್ರೀಗಳು ಸನ್ಮಾನಿಸಿ ದೇಶ ಕಾಯುವ ಕಾರ್ಯಕ್ಕೆ ಶುಭ ಹಾರೈಸಿದರು.
ಕು.ಶ್ರಾವಣ್ಯ ಪ್ರಾರ್ಥನೆ ಹಾಡಿದರು. ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು. ಚಾತುರ್ಮಾಸ್ಯದ ಬಳಿಕ ಸೀಮೋಲ್ಲಂಗನಗೈದಿರುವ ಶ್ರೀಗಳು ಮಂಗಳವಾರ ಬೆಳಿಗ್ಗೆ ಪುರಪ್ರವೇಶಿಸುವರು.