ನವದೆಹಲಿ: ಮುಕ್ತ ಕೃತಕ ಬುದ್ಧಿಮತ್ತೆ ಚಾಟ್ ಜಿಪಿಟಿಯ ಆದಾಯದಲ್ಲಿ ಕುಸಿತ ಕಂಡಿದ್ದು, ಇದು ಚಾಟ್ ಜಿಪಿಟಿಯ ಪಾವತಿಸಿದ ಸೇವೆಗಳನ್ನು ಪಡೆಯುವುದಕ್ಕೆ ಎಷ್ಟು ಮಂದಿ ಆಸಕ್ತರಾಗಿದ್ದಾರೆ ಎನ್ನುವುದರ ಮುನ್ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾರ್ಕೆಟ್ ಇಂಟಲಿಜೆನ್ಸ್ ಸಂಸ್ಥೆ ಆಪ್ ಫಿಗರ್ಸ್ ನ ಪ್ರಕಾರ ಚಾಟ್ ಜಿಪಿಟಿ ಕಳೆದ ಕೆಲವು ತಿಂಗಳುಗಳಲ್ಲಿ ಶೇ.30 ಕ್ಕಿಂತ ಹೆಚ್ಚು ಆದಾಯಕ್ಕೆ ಹೊಡೆತ ಬಿದ್ದಿದ್ದು, ಬೆಳವಣಿಗೆ ದರ ಹಿಂದೆಂದಿಗಿಂತಲೂ ಕಡಿಮೆ ಅಂದರೆ ಶೇ.20 ರಷ್ಟಿದೆ.
ಮಿಲಿಯನ್ ಗಟ್ಟಲೆ ಲೆಕ್ಕಾಚಾರದಲ್ಲಿ ಶೇ.20 ರಷ್ಟು ಬೆಳವಣಿಗೆ ಎಂಬುದು ಸಣ್ಣ ವಿಷಯವಲ್ಲ. ಆದರೆ ಕೆಲವು ತಿಂಗಳ ಹಿಂದೆ ಶೇ.30 ರಷ್ಟು ಇದ್ದದ್ದು ಈಗ ಶೇ.20 ರಷ್ಟಾಗಿದೆ ಎಂದು ವರದಿ ಹೇಳಿದೆ.
ಅಪ್‌ಗ್ರೇಡ್ ಮಾಡಿದ ChatGPT+ ಚಂದಾದಾರಿಕೆ ಸೇವೆಗೆ ಮಾಸಿಕ 19.99 ಡಾಲರ್ ವೆಚ್ಚವಾಗುತ್ತದೆ. ಈ ಯೋಜನೆಯಲ್ಲಿ ವೇಗವಾದ ಪ್ರತಿಕ್ರಿಯೆ ಸಮಯಗಳು, ಗರಿಷ್ಠ ಸಮಯದಲ್ಲಿ ಆದ್ಯತೆಯ ಪ್ರವೇಶ ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಣೆಗಳು ಲಭ್ಯವಿರಲಿದೆ.
“ನಮ್ಮ ಅಂದಾಜಿನ ಪ್ರಕಾರ ChatGPT ಸೆಪ್ಟೆಂಬರ್‌ನಲ್ಲಿ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ನಿಂದ $3.2 ಮಿಲಿಯನ್ ಗಳಿಸಿದೆ ”ಎಂದು ಆಪ್ಫಿಗರ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಸುಮಾರು 15.6 ಮಿಲಿಯನ್ ಜನರು ಓಪನ್ ಎಐ ನ ಚಾಟ್ ಜಿಪಿಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ.