ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರು.
4 ರಾಜ್ಯಗಳಲ್ಲಿ ಒಂದೇ ಹಂತ, ಛತ್ತೀಸ್ ಘಡದಲ್ಲಿ 2 ಹಂತದಲ್ಲಿ ಮತದಾನ
ಮಿಜೋರಾಂ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನಕ್ಸಲ್ ಸಂಘರ್ಷ ಪೀಡಿತ ಛತ್ತೀಸ್ ಘಡದಲ್ಲಿ ಮಾತ್ರ 2 ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ಯೋಜಿಸಿದೆ. ಅದರಂತೆ ಮಿಜೋರಾಂ ನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದ್ದು, ಛತ್ತೀಸ್ ಘಡದಲ್ಲಿ ನವೆಂಬರ್ 7 ಮತ್ತು 17ರಂದು 2 ಹಂತದಲ್ಲಿ ಮತದಾನ ನಡೆಯಲಿದೆ. ಉಳಿದಂತೆ ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು, ರಾಜಸ್ಥಾನದಲ್ಲಿ ನವೆಂಬರ್ 23ರಂದು ಮತ್ತು ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 5ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, "ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 8.2 ಕೋಟಿ ಪುರುಷ ಮತ್ತು 7.8 ಕೋಟಿ ಮಹಿಳಾ ಮತದಾರರು ಇರಲಿದ್ದಾರೆ. ಈ ಪೈಕಿ 60.2 ಲಕ್ಷ ಮಂದಿ ಮೊದಲ ಬಾರಿಗೆ ಮತದಾರರಾಗಿದ್ದಾರೆ" ಎಂದು ಹೇಳಿದರು.
ಅಂತೆಯೇ ಐದು ವಿಧಾನಸಭಾ ಚುನಾವಣೆಗೆ ಮುನ್ನ ನಾವು ರಾಜಕೀಯ ಪಕ್ಷಗಳು ಮತ್ತು ಜಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರು, ರಾಜಕೀಯ ಪಕ್ಷಗಳ ವಕ್ತಾರರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.ಚುನಾವಣಾ ಆಯುಕ್ತರು ನೀಡಿರುವ ಮಾಹಿತಿಯಂತೆ ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ 17ಗೆ ಕೊನೆಗೊಳ್ಳಲ್ಲಿದ್ದು, ಛತ್ತೀಸ್ಗಢ ವಿಧಾನಸಭೆ ಅವಧಿ ಜನವರಿ 3, ಮಧ್ಯಪ್ರದೇಶ ವಿಧಾನಸಭೆ ಅವಧಿ ಜನವರಿ 8, ರಾಜಸ್ಥಾನ ವಿಧಾನಸಭೆ ಅವಧಿ ಜನವರಿ 14 ಮತ್ತು ತೆಲಂಗಾಣ ವಿಧಾನಸಭೆ ಅವಧಿಯು ಜನವರಿ 18ಕ್ಕೆ ಕೊನೆಗೊಳ್ಳಲಿದೆ.
ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳು, ಛತ್ತೀಸ್‌ಗಢದ- 90 ಸ್ಥಾನಗಳು, ರಾಜಸ್ಥಾನದ 200 ಸ್ಥಾನಗಳು, ತೆಲಂಗಾಣದ 119 ಸ್ಥಾನಗಳು ಮತ್ತು ಮಿಜೋರಾಂನ 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮತದಾರರು ಅಕ್ಟೋಬರ್ 17 ರಿಂದ ನವೆಂಬರ್ 30 ರವರೆಗೆ ಮತದಾರರ ಪಟ್ಟಿಯಲ್ಲಿ ವಿವರಗಳನ್ನು ನವೀಕರಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಅಂತೆಯೇ 5 ರಾಜ್ಯಗಳಲ್ಲಿ 1.77 ಲಕ್ಷ ಮತಗಟ್ಟೆಗಳು ಮತ್ತು 1.01 ಲಕ್ಷ ಮತಗಟ್ಟೆಗಳು ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ನಡೆಯುವ ಈ ಐದು ರಾಜ್ಯಗಳಲ್ಲಿ 940 ಕ್ಕೂ ಹೆಚ್ಚು ಅಂತರ-ರಾಜ್ಯ ಗಡಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗುತ್ತಿದ್ದು, ಆ ಮೂಲಕ ನಾವು ಯಾವುದೇ ಅಕ್ರಮ ನಗದು, ಮದ್ಯ, ಉಚಿತ ವಸ್ತುಗಳು ಮತ್ತು ಮಾದಕ ವಸ್ತುಗಳ ಗಡಿಯಾಚೆಗಿನ ಚಲನೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.