ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಚಟುವಟಿಕೆಗಳ ಮೌಲ್ಯಮಾಪನದ ಅಂಗವಾಗಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದುಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅವಲೋಕನ ನಡೆಸಿದರು. ಈ ಸಂದರ್ಭ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಗಳ ಕುರಿತು ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಉದುಮ ಗ್ರಾಮ ಪಂಚಾಯಿತಿ ಕೇರಳದ ಮೊದಲ ಪ್ರವಾಸೋದ್ಯಮ ಪಂಚಾಯತ್ ಆಗಿ ಖ್ಯಾತಿ ಗಳಿಸಿದ್ದು, ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿ ಅನುಷ್ಠಾನಗೊಳಿಸುವಬಗ್ಗೆ ಮನವಿ ಸಲ್ಲಿಸಿದರು. ಕೋಟಿಕುಳಂ ರೈಲ್ವೆ ಮೇಲ್ಸೇತುವೆ ಕಾಮಗಾರಿ ತ್ವರಿತಗೊಳಿಸಬೇಕು, ಆದರ್ಶ ನಿಲ್ದಾಣವೆಂದು ಘೋಷಿಸಲಾಗಿರುವ ಕೋಟಿಕುಳಂ ರೈಲ್ವೆ ನಿಲ್ದಾಣದಲ್ಲಿ ದೂರಸಂಚಾರದ ಪರಶುರಾಮ್ ಮತ್ತು ಇಂಟರ್‍ಸಿಟಿ ರೈಲುಗಳಿಗೆ ನಿಲುಗಡೆ ನೀಡಬೇಕು, ಬಡ್ಸ್ ಸ್ಕೂಲ್ ಕಟ್ಟಡಕ್ಕೆ ಕಾಸರಗೋಡು ಪ್ಯಾಕೇಜ್ ಮೂಲಕ ಹಣ ಮಂಜೂರುಗೊಳಿಸಬೇಕು, ಕುಡಿಯುವ ನೀರಿನ ಸಮಸ್ಯೆ, ಜಾಗದ ಹಕ್ಕುಪತ್ರ ಸಮಸ್ಯೆ ಬಗೆಹರಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಗ್ರಾಪಂ ಅಧ್ಯಕ್ಷೆ ಪಿ.ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೆಜಿಮೋನ್ ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ವಿ.ಬಾಲಕೃಷ್ಣನ್ ವಂದಿಸಿದರು.