ತಿರುವನಂತಪುರ (PTI): ಮಾನವಸಹಿತ ಬಾಹ್ಯಾಕಾಶ ಯೋಜನೆ 'ಗಗನಯಾನ'ದ ಅಡಿಯಲ್ಲಿ, ಯುದ್ಧ ವಿಮಾನ ಚಲಾಯಿಸುವ ಮಹಿಳಾ ಪೈಲಟ್ ಅಥವಾ ಮಹಿಳಾ ವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.

ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಸಾಗಲಿರುವ ಗಗನಯಾನ ನೌಕೆಯಲ್ಲಿ ಮಹಿಳೆಯನ್ನು ಹೋಲುವ ರೊಬೊಟ್ ಒಂದು ಇರಲಿದೆ ಎಂದು ಅವರು ತಿಳಿಸಿದ್ದಾರೆ. ಇಸ್ರೊ ಸಂಸ್ಥೆಯ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯು ಭೂಮಿಯ ಮೇಲ್ಮೈನಿಂದ 400 ಕಿ.ಮೀ. ಎತ್ತರದ ಕಕ್ಷೆಗೆ ಮನುಷ್ಯರನ್ನು ಕಳುಹಿಸಿ, ಮೂರು ದಿನಗಳ ನಂತರದಲ್ಲಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆಸಿಕೊಳ್ಳುವ ಉದ್ದೇಶ ಹೊಂದಿದೆ.
'ಇದರಲ್ಲಿ ಅನುಮಾನವೇ ಬೇಡ... ಆದರೆ ನಾವು ಮಹಿಳಾ ಅಭ್ಯರ್ಥಿಯನ್ನು ಹುಡುಕಬೇಕಿದೆ' ಎಂದು ಸೋಮನಾಥ್ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಮಾನವಸಹಿತ ಬಾಹ್ಯಾಕಾಶ ಪ್ರಯಾಣ ಯೋಜನೆಯ ಭಾಗವಾಗಿ 'ಟಿವಿ-ಡಿ1' ವಾಹನದ ಪರೀಕ್ಷೆಯು ಯಶಸ್ಸು ಕಂಡ ಮಾರನೆಯ ದಿನ ಅವರು ಈ ಮಾತು ಹೇಳಿದ್ದಾರೆ.
ಮಾನವಸಹಿತ ಬಾಹ್ಯಾಕಾಶ ಯಾನವು 2025ಕ್ಕೆ ಮೊದಲು ನಡೆಯುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಯುದ್ಧ ವಿಮಾನಗಳನ್ನು ಪರೀಕ್ಷಾರ್ಥವಾಗಿ ಹಾರಿಸುವ ಮಹಿಳಾ ಪೈಲಟ್‌ಗಳನ್ನು ಗುರುತಿಸಬೇಕು. ಎರಡನೆಯ ಹಂತದಲ್ಲಿ ಮಹಿಳಾ ವಿಜ್ಞಾನಿಗಳನ್ನು ಗಗನಯಾನಿಗಳನ್ನಾಗಿ ಕಳುಹಿಸಲಾಗುತ್ತದೆ ಎಂದು ಸೋಮನಾಥ್ ಹೇಳಿದ್ದಾರೆ.
2035ಕ್ಕೆ ಮೊದಲು ಪೂರ್ಣ ಪ್ರಮಾಣದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಉದ್ದೇಶವನ್ನು ಇಸ್ರೊ ಹೊಂದಿದೆ ಎಂದೂ ಅವರು ಹೇಳಿದ್ದಾರೆ.