ತಿರುವನಂತಪುರಂ: ಶ್ರೀ ಪದ್ಮನಾಭ ಸ್ವಾಮಿ ದೇಗುಲದಲ್ಲಿ ವಾರ್ಷಿಕ ಅಲ್ಪಾಶಿ ಹಬ್ಬದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಹಿಂದೂಯೇತರ ಮಹಿಳೆಯೊಬ್ಬರು ಭೇಟಿ ನೀಡಿದ್ದಾರೆ.
ಉತ್ಸವದ ಧ್ವಜಾರೋಹಣಕ್ಕೆ ಮುನ್ನ ನಡೆದ ಮಣ್ಣುನೀರು ಕೋರಲ್ ಸಮಾರಂಭವನ್ನು ಪುನ: ಮಾಡುವಂತೆ ದೇವಸ್ಥಾನದ ತಂತ್ರಿ ಸೂಚಿಸಿದರು.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ತಿರುವನಂತಪುರದ ಮಣಕ್ಕಾಡ್ ನಿಂದ ಮುಸ್ಲಿಂ ಮಹಿಳೆಯೊಬ್ಬರು ದೇವಸ್ಥಾನಕ್ಕೆ ಬಂದಿದ್ದರು. ಅವರನ್ನು ಮೊದಲು ಪರಿಚಯವಿದ್ದವರು ದೇವಸ್ಥಾನದಲ್ಲಿ ಗುರುತಿಸಿದ್ದರು. ನಂತರ ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ವಿಚಾರಣೆ ನಡೆಸಿ ದೇವಸ್ಥಾನದಿಂದ ಹೊರ ಕಳಿಸಲಾಯಿತು.
ಪದ್ಮನಾಭ ಸ್ವಾಮಿ ದೇಗುಲದ ಸಂಪ್ರದಾಯದಂತೆ ಕೇವಲ ಹಿಂದೂ ಭಕ್ತರಿಗೆ ಮಾತ್ರ ದೇವಾಲಯದ ಪ್ರವೇಶಕ್ಕೆ ಅವಕಾಶವಿದೆ. ಹಿಂದೂಯೇತರರು ದೇವಸ್ಥಾನಕ್ಕೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಬಯಸಿದರೆ, ಅವರು ಹಿಂದೂ ಧರ್ಮದಲ್ಲಿ ನಂಬಿಕೆ ಉಳ್ಳವರು ಎಂದು ಅಫಿಡವಿಟ್ ನೀಡಬೇಕು.
ಧ್ವಜಾರೋಹಣಕ್ಕೂ ಮುನ್ನ ನಡೆಯುವ ದ್ರವ್ಯಕಲಶ, ಮಣ್ಣುನೀರು ಕೋರಲ್ ಸೇರಿದಂತೆ ದೇವಸ್ಥಾನದ ವಿಧಿವಿಧಾನಗಳನ್ನು ಪುನ: ನೆರವೇರಿಸಲು ದೇವಸ್ಥಾನದ ತಂತ್ರಿ ಸೂಚಿಸಿದ್ದಾರೆ. ಇದರ ಅಂಗವಾಗಿ ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಯಿತು. ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ದೇವಾಲಯದ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಬೇಕಾಯಿತು.