ಕೆಲ ಪೋಷಕರು ನಮ್ಮ ಮಗ/ ಮಗಳು ತುಂಬಾನೇ ಇಂಟ್ರೋವರ್ಟ್, ಯಾರ ಜೊತೆನೂ ಹೆಚ್ಚಾಗಿ ಬೆರೆಯುವುದಿಲ್ಲ ಎಂದು ತುಂಬಾ ಬೇಸರದಿಂದ ಹೇಳುತ್ತಾರೆ. ಇಂಟ್ರೋವರ್ಟ್ ಅಂದ ಮಾತ್ರಕ್ಕೆ ನೀವು ತುಂಬಾ ಟೆನ್ಷನ್ ಮಾಡಬೇಕಾಗಿಲ್ಲ, ಎಲ್ಲಾ ಮಕ್ಕಳು ಒಂದೇ ರಿತಿ ಇರುವುದಿಲ್ಲ. ಕೆಲ ಮಕ್ಕಳು ತುಂಬಾನೇ ಚಟುವಟಿಕೆಯಿಂದ ಇರುತ್ತಾರೆ, ಎಲ್ಲರ ಜೊತೆ ಸುಲಭವಾಗಿ ಬೆರೆಯುತ್ತಾರೆ.
ಆದರೆ ಇನ್ನು ಕೆಲವು ಮಕ್ಕಳು ಅಷ್ಟು ಸುಲಭವಾಗಿ ಬೇರೆಯವರ ಜೊತೆ ಬೆರೆಯುವುದಿಲ್ಲ. ಕೆಲವರ ಜೊತೆ ಮಾತ್ರ ಮಾತನಾಡುತ್ತಾರೆ, ತಾವಾಯ್ತು, ತಮ್ಮ ಪಾಡಾಯ್ತು ಎಂದು ಇದ್ದು ಬಿಡುತ್ತಾರೆ. ಆದರೆ ಹಿಗೆ ಇರುವ ಮಕ್ಕಳಲ್ಲಿ ಆತ್ಮವಿಶ್ವಾಸ ಕಡಿಮೆ ಇರಬಹುದು, ಆದ್ದರಿಂದ ಅವರಲ್ಲಿ ನಾಯಕತ್ವದ ಗುಣ ಬೆಳೆಸಲು, ಅವರಲ್ಲಿ ಆತ್ಮವಿಶ್ವಾಸ ತುಂಬಲು ಪೋಷಕರು ಈ ವಿಷಯಗಳತ್ತ ಗಮನ ಕೊಡುವುದು ಒಳ್ಳೆಯದು:
ಇಂಟ್ರೋವರ್ಟ್ ಮಕ್ಕಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಪೋಷಕರೇ ಈ ವಿಷಯಗಳನ್ನು ಪರಿಗಣಿಸಿ
* ಮಗು ಇಂಟ್ರೋವರ್ಟ್ ಆಗಿದ್ದರೆ ಅವನನ್ನು ಅಥವಾ ಅವಳನ್ನು ಅವರ ಪಾಡಿಗೆ ಬಿಡಬೇಕು. ನೀನು ಏಕೆ ಯಾರ ಜೊತೆ ಬೆರೆಯಲ್ಲ ಎಂದಲ್ಲ ಹೇಳಬೇಡಿ.
* ಇವರು ಕೆಲವೇ ಕೆಲವರನ್ನು ಮಾತ್ರ ತುಂಬಾನೇ ಹಚ್ಚಿಕೊಳ್ಳುತ್ತಾರೆ.
* ಆದರೆ ಇವರು ಪ್ರತಿಯೊಂದು ವಿಷಯವನ್ನು ಗಮನಿಸುತ್ತಾರೆ, ಅವರಷ್ಟಕ್ಕೆ ಅವರಿದ್ದಾರೆ ಎಂದ ಮಾತ್ರಕ್ಕೆ ಯಾವುದೇ ವಿಷಯದ ಕಡೆಗೆ ಗಮನಹರಿಸುತ್ತಿಲ್ಲ ಎಂದು ಭಾವಿಸಬೇಡಿ.
* ಇವರ ಕಲ್ಪನಾಶಕ್ತಿ ತುಂಬಾನೇ ಚೆನ್ನಾಗಿರುತ್ತದೆ, ಓದುವುದು, ಚಿತ್ರ ಬಿಡಿಸುವುದು ಹೀಗೆ ಇವರಲ್ಲಿ ಕ್ರಿಯಾತ್ಮಕ ಕೌಶಲ್ಯ ತುಂಬಾನೇ ಇರುತ್ತದೆ.
ಮಕ್ಕಳು ಇಂಟ್ರೋವರ್ಟ್ ಆಗಿದ್ದರೆ ಪೋಷಕರು ಏನು ಮಾಡಬೇಕು?
ಮಕ್ಕಳು ಇಂಟ್ರೋವರ್ಟ್ ಆಗಿದ್ದರೆ ಅವರ ಆಸಕ್ತಿಯ ವಿಷಯವೇನು ಎಂದು ತಿಳಿದು ಅವರನ್ನು ಬೆಂಬಲಿಸಿ. ಅವರ ಆಸಕ್ತಿಗಳನ್ನು ಪ್ರೋತ್ಸಾಹಿಸಿ.
ಅವರ ಅಭಿಪ್ರಾಯಗಳನ್ನು ಗೌರವಿಸಿ
ಅವರನ್ನು ಯಾವುದೇ ವಿಷಯಕ್ಕೆ ಒತ್ತಡ ಹಾಕಬೇಡಿ, ಹೀಗೆ ಮಾಡಿದರೆ ಅವರ ಆತ್ಮವಿಶ್ವಾಸ ಕಡಿಮೆಯಾಗುವುದು. ಅವರ ಅಭಿಪ್ರಾಯಗಳನ್ನು ಗೌರವಿಸಿ, ಇದರಿಂದ ಅವರಿಗೆ ಆತ್ಮವಿಶ್ವಾಸ ಹೆಚ್ಚಾಗುವುದು.
ಸ್ವಲ್ಪ ಸಾಮಾಜಿಕವಾಗಿ ಬೆರೆಯುವಂತೆ ಮಾಡಿ
ನಿಮ್ಮ ಮಗು ಒಂಟಿಯಾಗಿರುತ್ತದೆ ಎಂದು ಮಗ ಅಥವಾ ಮಗಳನ್ನು ಹಾಗೇ ಬಿಡಬೇಡಿ. ನೀವು ಅವರಿಗೆ ಏನು ಆಸಕ್ತಿ ಇದೆ ಎಂದು ತಿಳಿದು ಅದರಲ್ಲಿ ಸೇರಿಸಿ. ಉದಾಹರಣೆ ಅವರಿಗೆ ಸಂಗೀತ ಇಷ್ಟವಿದ್ದರೆ ಸಂಗೀತ ಕ್ಲಾಸ್‌ಗೆ ಹಾಕಿ. ಹೀಗೆ ಮಾಡುವುದರಿಂದ ಅವರ ಸರ್ಕಲ್ ಹೆಚ್ಚಾಗುವುದು. ಸಾಮಾಜಿಕವಾಗಿ ಹೆಚ್ಚು-ಹೆಚ್ಚಾಗಿ ಬೆರೆಯಲಾರಂಭಿಸುತ್ತಾರೆ.
ಸಂವಹನ ಮಾಡಲು ಪ್ರೋತ್ಸಾಹಿಸಿ
ಅವರಿಗೆ ಸಪೋರ್ಟಿವ್ ವಾತಾವರಣ ಇರಲಿ. ಅವರು ಏನಾದರೂ ಹೇಳಲು ಬಂದಾಗ ತಾಳ್ಮೆಯಿಂದ ಕೇಳಿ. ನೀವು ಅವರ ಜೊತೆ ಸಮಯ ಕಳೆದು ಅವರನ್ನು ಅರಿಯಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಅವರು ಬೆರೆಯಲು ಆರಂಭಿಸುತ್ತಾರೆ.
ಅವರ ಸಾಧನೆಗಳನ್ನು ಸೆಲೆಬ್ರೇಟಿ ಮಾಡಿ
ಅವರು ಏನಾದರೂ ಚಿಕ್ಕ ಸಾಧನೆ ಮಾಡಿದರೂ ಅದನ್ನು ಸೆಲೆಬ್ರೇಟ್ ಮಾಡಿ. ಅವರನ್ನು ಫ್ರೆಂಡ್ ಸರ್ಕಲ್ ಜೊತೆ ಬೆರೆಯಲು ಬಿಡಿ. ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ. ಹೀಗೆ ಮಾಡುವುದರಿಂದ ಇಂಟ್ರೋವರ್ಟ್ ಮಕ್ಕಳು ನಿಧಾನಕ್ಕೆ ಬೇರೆಯವರ ಜೊತೆ ಬೆರೆಯಲು ಆರಂಭಿಸುತ್ತಾರೆ.