ನವದೆಹಲಿ: ತಂತ್ರಜ್ಞಾನವನ್ನು ಯುವ ಜನತೆಯ ಕಲ್ಯಾಣ ಹಾಗೂ ಅವರ ಮುಂದಾಳತ್ವದಲ್ಲಿ ಅಭಿವೃದ್ಧಿ ಸಾಧಿಸಲು ಬಳಸಿಕೊಳ್ಳುವ ಉದ್ದೇಶದ 'ಮೇರಾ ಯುವ ಭಾರತ್' (ಮೈ ಭಾರತ್) ಎಂಬ ಸ್ವಾಯತ್ತ ಸಂಸ್ಥೆಯೊಂದನ್ನು ಸ್ಥಾಪಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಪ್ರತಿಯೊಬ್ಬ ಯುವಕ/ಯುವತಿಗೆ ತನ್ನ ಆಶೋತ್ತರಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಸಮಾನ ಅವಕಾಶಗಳನ್ನು ಒದಗಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಬೇಕು ಎಂಬುದೇ ಈ ಸಂಸ್ಥೆ ಸ್ಥಾಪನೆಯ ಮುಖ್ಯ ಉದ್ದೇಶ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, 'ಈ ಸಂಸ್ಥೆಯನ್ನು ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನೋತ್ಸವ ದಿನವಾದ ಅಕ್ಟೋಬರ್ 31ರಂದು ಲೋಕಾರ್ಪಣೆ ಮಾಡಲಾಗುತ್ತದೆ' ಎಂದರು.
'ರಾಷ್ಟ್ರೀಯ ಯುವ ನೀತಿಯಲ್ಲಿ ವ್ಯಾಖ್ಯಾನಿಸಿರುವಂತೆ, 15 ರಿಂದ 29 ವರ್ಷ ವಯೋಮಾನದವರಿಗೆ 'ಮೈ ಭಾರತ್'ನ ಪ್ರಯೋಜನ ಸಿಗಲಿದೆ. ಒಂದು ವೇಳೆ, ಹದಿಹರೆಯದವರಿಗಾಗಿಯೇ ನಿರ್ದಿಷ್ಟ ಯೋಜನೆ ರೂಪಿಸಿದ್ದಲ್ಲಿ, ಆಗ 10-19 ವರ್ಷ ವಯೋಮಾನದವರನ್ನು ಫಲಾನುಭವಿಗಳೆಂದು ಪರಿಗಣಿಸಲಾಗುತ್ತದೆ' ಎಂದು ಹೇಳಿದರು.
'ಮೇರಾ ಯುವ ಭಾರತ್'ನ ಉದ್ದೇಶಗಳು
* ಸಂವಾದದ ಬದಲಾಗಿ ಪ್ರಾಯೋಗಿಕ ಕಲಿಕೆ ಮೂಲಕ ಯುವ ಜನತೆಯಲ್ಲಿ ನಾಯಕತ್ವ ಬೆಳೆಸುವುದು
* ಯುವ ಜನತೆಯನ್ನು ಸಮುದಾಯ ಹಂತದಲ್ಲಿಯೇ ನಾಯಕರನ್ನಾಗಿ ರೂಪಿಸಿವುದು
* ಸಮುದಾಯದ ಅಗತ್ಯಗಳಿಗೆ ಯುವ ಜನತೆ ಸ್ಪಂದಿಸುವಂತೆ ಮಾಡುವುದು
* ಯುವ ಸಮುದಾಯ ಮತ್ತು ವಿವಿಧ ಸಚಿವಾಲಯಗಳ ನಡುವೆ ಸೇತುವೆಯಾಗಬಲ್ಲ ಏಕೀಕೃತ ವೇದಿಕೆಯೊಂದನ್ನು ರೂಪಿಸುವುದು.